ಸರ್ಕಾರದ ಮೇಲೆ ಯುವಜನತೆಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ಉಂಟಾಗುವುದು ಘೋಷಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ, ಯಾವ ಲಿಟಿಗೇಷನ್ ಚಕ್ರವ್ಯೂಹಕ್ಕೂ ಸಿಲುಕದೆ ಇದು ಪೂರ್ಣಗೊಂಡಾಗ ಮಾತ್ರ. ಸರ್ಕಾರವೀಗ ಘೋಷಿಸಿರುವ ಹುದ್ದೆಗಳ ಭರ್ತಿ ಯುವ ಸಮೂಹಕ್ಕೆ ಬಹುದೊಡ್ಡ ಪರಿಹಾರ ಎಂಬುದು ಗೋಚರಿಸಿದರೂ, ಕಾನೂನು ಪ್ರಕಾರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಕೆಲವೊಂದು ತೊಡಕುಗಳಿವೆ.
ಸರ್ಕಾರಿ ನೌಕರಿಗಾಗಿ ಚಾತಕಪಕ್ಷಿಗಳಂತಿದ್ದ ನಾಡಿನ ಅರ್ಧಕೋಟಿ ಯುವಕ, ಯುವತಿಯರ ಬದುಕಿನಲ್ಲಿ ಆಸೆ ಚಿಗುರಿದೆ. ಎರಡು ದಿನಗಳ ಹಿಂದೆ ರಾಜ್ಯ ಸಂಪುಟದಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯವೀಗ ಪ್ರತಿಭಟನಾಕಾರರ ಹೋರಾಟಕ್ಕೆ ದೊರೆತ ಜಯ ಎಂದರೆ ತಪ್ಪಲ್ಲ. ಐವತ್ತು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲು ಸರ್ಕಾರವೀಗ ತೀರ್ಮಾನಿಸಿದೆ. ವಿವಿಧ ವರ್ಗಗಳ ಮೀಸಲು ಮತ್ತು ಕಾನೂನಿನ ಪರಿಧಿಯಲ್ಲಿ ಲೋಕಸೇವಾ ಆಯೋಗ ಮತ್ತು ನೇಮಕಾತಿ ಪ್ರಾಧಿಕಾರವೀಗ ಹುದ್ದೆಗಳನ್ನು ಭರ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಮೀಸಲು ನಿಗದಿ ಸಂಬಂಧ ಸರ್ಕಾರದ ಮಟ್ಟದಲ್ಲಿ ಈಗ ತಲೆದೋರಿರುವ ಗೊಂದಲದಿಂದಲೇ ಹುದ್ದೆಗಳ ಭರ್ತಿಗೆ ಪ್ರಮುಖ ತೊಡಕಾಗಿದೆ ಎಂಬುದು ನಿರ್ವಿವಾದ. ಇದನ್ನು ಸರ್ಕಾರ ಸಮಂಜಸ ಮತ್ತು ಸಮರ್ಪಕ ರೀತಿಯಲ್ಲಿ ಬಗೆಹರಿಸದೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದು. ಈ ದಿಶೆಯಲ್ಲಿ ರಾಜ್ಯ ಸರ್ಕಾರ ಮೀಸಲು ಸಂಬಂಧಿತ ಪ್ರಮುಖ ತೀರ್ಮಾನಗಳನ್ನೂ ತ್ವರಿತಗತಿಯಲ್ಲಿ ಪರಿಶೀಲಿಸಿ ಕ್ರಮ ಜರುಗಿಸುವುದು ಅವಶ್ಯಕ.
ಮೇಲ್ನೋಟಕ್ಕೆ ಸರ್ಕಾರವೀಗ ಘೋಷಿಸಿರುವ ಹುದ್ದೆಗಳ ಭರ್ತಿ ಯುವಸಮೂಹಕ್ಕೆ ಬಹುದೊಡ್ಡ ಪರಿಹಾರ ಎಂಬ ಅಂಶ ಗೋಚರಿಸಿದರೂ, ಕಾನೂನು ಪ್ರಕಾರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಕೆಲವೊಂದು ತೊಡಕುಗಳಿವೆ ಎಂಬುದನ್ನು ಮರೆಯುವಂತಿಲ್ಲ. ಈ ಸರ್ಕಾರದ ಮೇಲೆ ಯುವಜನತೆಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸ ಉಂಟಾಗಬೇಕಾದರೆ, ಘೋಷಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಾವ ಲಿಟಿಗೇಷನ್ ಚಕ್ರವ್ಯೂಹಕ್ಕೆ ಸಿಲುಕದೆ ಪೂರ್ಣಗೊಂಡಾಗ ಮಾತ್ರ. ಇದರಲ್ಲಿ ಸರ್ಕಾರ ಮತ್ತು ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಪಾತ್ರವೂ ಅತಿ ಗುರುತರ. ಅಲ್ಲದೆ ನೇಮಕಾತಿ ಸಂಬಂಧ ವಿವಿಧ ಕೋರ್ಟುಗಳಲ್ಲಿ ವಿವಿಧ ಹಂತಗಳಲ್ಲಿರುವ ಪ್ರಕರಣಗಳ ಸೂಕ್ತ ವಿಲೇವಾರಿ ಬಗ್ಗೆಯೂ ಸರ್ಕಾರವೀಗ ಸಮರೋಪಾದಿಯಲ್ಲಿ ಕಾರ್ಯಮಗ್ನವಾಗಬೇಕಿದೆ.
ಬಹಳಷ್ಟು ಸರ್ಕಾರಿ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬೀಳಲು ಕೆಎಟಿ ಮತ್ತು ಹೈಕೋರ್ಟ್ ಮುಂದಿರುವ ಪೆಂಡಿಂಗ್ ಮತ್ತು ತಡೆಯಾಜ್ಞೆಗಳೇ ಕಾರಣ ಎಂಬುದು ಗಮನಾರ್ಹ. ಈ ಬಗೆಯ ವ್ಯಾಜ್ಯಗಳು ನ್ಯಾಯಾಲಯದಿಂದ ವಿಲೇವಾರಿಯಾಗದೆ ಈಗ ಸರ್ಕಾರ ಘೋಷಿಸಿರುವ ಅರ್ಧಕೋಟಿ ಖಾಲಿ ಹುದ್ದೆಗಳ ಭರ್ತಿ ಕಷ್ಟಕರ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟುಗಳ ಮುಂದೆ ರಾಜ್ಯ ಸರ್ಕಾರದ ಮೀಸಲು ನಿಲುವು ಮತ್ತು ಸರ್ಕಾರದ ನೀತಿ ಕೂಡಾ ಗಟ್ಟಿಯಾಗಿ ಪ್ರತಿಪಾದನೆಯಾಗಬೇಕಿದೆ.
ಯುವ ಜನತೆಗೆ ನೌಕರಿ ನೀಡುವ ಸರ್ಕಾರಿ ಪ್ರಕ್ರಿಯೆಗೆ ಕೋರ್ಟುಗಳಲ್ಲಿ ತಾಂತ್ರಿಕ ಸಮಸ್ಯೆಗಳೇನಾದರೂ ಉಂಟಾಗಿದ್ದರೆ ಅವುಗಳನ್ನು ಸರ್ಕಾರದ ಪರವಾಗಿ ವಕಾಲತ್ತು ವಹಿಸುವ ಅಡ್ವೋಕೇಟ್ ಜನರಲ್ ಮತ್ತು ಸರ್ಕಾರಿ ವಕೀಲರು ನ್ಯಾಯಪೀಠಗಳ ಮುಂದೆ ಸಮರ್ಥವಾದ ವಾದವನ್ನು ಮಂಡಿಸುವುದು ಅನಿವಾರ್ಯ. ಮೀಸಲಾತಿ ಸಮಸ್ಯೆಯಿಂದ ಸರ್ಕಾರಗಳು ಎಷ್ಟು ದಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲು ಸಾಧ್ಯ? ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅನುಸಾರವೇ ಐವತ್ತು ಸಾವಿರಕ್ಕೂ ಅಧಿಕ ಹುದ್ದೆUಳ ಭರ್ತಿಗೆ ರಾಜ್ಯ ಸರ್ಕಾರ ಟೊಂಕ ಕಟ್ಟಬೇಕಿದೆ.


