ಜಿಎಸ್ಟಿ ಅಧಿಕಾರಿಗಳ ಹೆಸರಿನಲ್ಲಿ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ ಐದು ಲಕ್ಷ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಬನಶಂಕರಿ ಪೊಲೀಸರು ಬಂಧಿಸಿ ದ್ದಾರೆ. ಆರೋಪಿಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಬನಶಂಕರಿಯ ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಿಎಸ್‌ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದಾದಾಪೀರ್ ಮತ್ತು ನಾಗರಾಜ್ ಬಂಧಿತ ಆರೋಪಿಗಳು. ಆರೋಪಿಗಳು ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ತೋರಿಸಿಕೊಂಡು ಪೀಣ್ಯ ಭಾಗದ ಗುಟ್ಕಾ ವ್ಯಾಪಾರಿಯ ಮನೆಗೆ ಹೋಗಿ, ನೀವು ನಿಯಮ ಉಲ್ಲಂಘಿಸಿ ಹಣಕಾಸು ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ, ನಿಮ್ಮ ಗೋಡೌನ್ ಹಾಗೂ ಕಚೇರಿಗೆ ದಾಳಿ ಮಾಡುತ್ತೇವೆ ಎಂದು ಬೆದರಿಸಿ ಐದು ಲಕ್ಷ ರೂಪಾಯಿ ಕೇಳಿದ್ದರು.
ಹಣ ಪಡೆದ ಬಳಿಕ ವಿಚಾರ ಯಾರಿಗಾದರೂ ತಿಳಿಸಿದರೆ ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆರೋಪಿಗಳು ಹಣವನ್ನು ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದರು. ಜಿಎಸ್‌ಟಿ ಅಧಿಕಾರಿಗಳ ಪರಿಶೀಲನೆಯ ಸಂದರ್ಭ ಐದು ಲಕ್ಷ ರೂಪಾಯಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಜಿಎಸ್‌ಟಿ ಸೂಪರಿಂಟೆಂಡೆಂಟ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಕಲಿ ಗುರುತಿನ ಚೀಟಿ ತಯಾರಿಸಲು ಇನ್ನಾರದರೂ ಸಹಾಯ ಮಾಡಿದ್ದಾರೆಯೇ, ಇಂಥ
ಕೃತ್ಯ ವನ್ನು ಇದಕ್ಕೂ ಮೊದಲು ಮಾಡಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


