ಗೃಹಿಣಿ ಉದ್ಯೋಗ ಮಾಡದಿರುವುದನ್ನು ಆಲಸ್ಯ ಎಂದು ವಿವರಿಸುವುದು ಸುಲಭ, ಮನೆಯನ್ನು ಉಳಿಸಿಕೊಳ್ಳುವಲ್ಲಿ ಆಕೆಯ ಶ್ರಮವನ್ನು ಗುರುತಿಸುವುದು ಹೆಚ್ಚು ಕಷ್ಟ ಎಂದು ದಿಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ನೌಕರಿ ಮಾಡದ ಗೃಹಿಣಿಯನ್ನು “ನಿಷ್ಕ್ರಿಯ ಹೆಂಡತಿ” ಎಂದು ಪರಿಗಣಿಸುವುದು, ಶ್ರಮವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬುದಾಗಿ ಹೇಳಿದೆ.
ಗೃಹಿಣಿಯ ದುಡಿಮೆಯು ಹಣ ಗಳಿಸುವ ಸಂಗಾತಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ, ಜೀವನಾಂಶವನ್ನು ನಿರ್ಧರಿಸುವಾಗ ಅವಳ ಕೊಡುಗೆಗಳನ್ನು ನಿರ್ಲಕ್ಷಿಸುವುದು ಅನ್ಯಾಯ ಎಂದು ಕೋರ್ಟ್ ತಿಳಿಸಿದೆ. ಪತ್ನಿಗೆ ಉದ್ಯೋಗವಿಲ್ಲದಿರುವುದನ್ನು ಆಲಸ್ಯ ಅಥವಾ ಉದ್ದೇಶಪೂರ್ವಕ ಅವಲಂಬನೆಗೆ ಸಮೀಕರಿಸಲಾಗುವುದಿಲ್ಲ. ಜೀವನಾಂಶವನ್ನು ನಿರ್ಧರಿಸುವಾಗ ಕಾನೂನು ಆರ್ಥಿಕ ಗಳಿಕೆ ಮಾತ್ರವಲ್ಲದೆ ಮನೆ ಮತ್ತು ಮನೆಯ ಸಂಬಂಧಕ್ಕೆ ಅವಳು ನೀಡುವ ಕೊಡುಗೆಗಳ ಆರ್ಥಿಕ ಮೌಲ್ಯವನ್ನು ಗುರುತಿಸಬೇಕು ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಜೀವನಾಂಶದ ಹಕ್ಕುಗಳನ್ನು ನಿರ್ಣಯಿಸುವಾಗ ನೌಕರಿ ಮಾಡದ ಗೃಹಿಣಿಯ ಕೊಡುಗೆಯನ್ನು ನಿರ್ಲಕ್ಷಿಸುವುದು ಅವಾಸ್ತವಿಕ ಮತ್ತು ಅನ್ಯಾಯವಾಗುತ್ತದೆ. ಹೆಂಡತಿ ಉದ್ಯೋಗ ಮಾಡದಿರುವುದನ್ನು ಆಲಸ್ಯ ಅಥವಾ ಗಂಡನ ಮೇಲೆ ಉದ್ದೇಶಪೂರ್ವಕ ಅವಲಂಬನೆಗೆ ಸಮನಾಗಿರುತ್ತದೆ ಎಂಬ ದೃಷ್ಟಿಕೋನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಮಹಿಳೆಯರ ರಕ್ಷಣೆ ಕಾಯ್ದೆಯಡಿ , ಕೌಟುಂಬಿಕ ಹಿಂಸಾಚಾರದಿಂದ ದೂರವಾದ ಹೆಂಡತಿಗೆ ಜೀವನಾಂಶ ನೀಡುವ ವಿಚಾರಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯವು ಈ ಅಭಿಪ್ರಾಯ ಪ್ರಕಟಿಸಿದೆ.


