ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ ಮಾಡಿರುವ 80 % ಕಮಿಷನ್ ಆರೋಪ ಸುಳ್ಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ ಸವಾಲು ಹಾಕಿದ್ದಾರೆ.
ಕಮಿಷನ್ ಆರೋಪದ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ದ್ವಂದ್ವ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆರೋಪಗಳಿಗೆ ಸಾಕ್ಷಿ ಕೇಳದವರು ಈಗ ಏಕೆ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಚಿವರು ಮೊದಲು ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಟೆಂಡರ್‌ಗಳು ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಹೋಗುತ್ತಿವೆ ಎಂದು ಆರೋಪಿಸಿದರು. ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕಸದ ಟೆಂಡರ್ ಪಡೆಯಲು 7% ಕಮಿಷನ್, ಬಿಲ್ ಬಿಡುಗಡೆಗೆ 7% ಹಾಗೂ ವಿಶೇಷ ಎಲ್‌ಒಸಿ ಪಡೆಯಲು 7% ನೀಡಬೇಕಾಗಿದೆ. ಇದರಿಂದ 21% ಕಮಿಷನ್ ಸರ್ಕಾರಕ್ಕೆ ಹೋಗುತ್ತಿದೆ. ಇಂಜಿನಿಯರ್‌ಗಳಿಗೆ ಬೇರೆ ಕಮೀಷನ್ ನೀಡಬೇಕಿದೆ. ಕಸದ ಸಮಸ್ಯೆಗೆ ಸರ್ಕಾರದ ‘ಮಾಫಿಯಾ’ವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅಶೋಕ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆದಿದೆ. ಮೈತ್ರಿ ಸುಗಮವಾಗಿ ಚುನಾವಣೆ ಎದುರಿಸುವುದಾಗಿ ಹೇಳಿದರು. ಸಣ್ಣಪುಟ್ಟ ಗೊಂದಲಗಳನ್ನುಬಗೆಹರಿಸಲಾಗುವುದು, ಅಂತಿಮ ತೀರ್ಮಾನ ಹೈಕಮಾಂಡ್‌ದ್ದು ಎಂದು ಹೇಳಿದರು.


