Tuesday, February 17, 2026
Menu

ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ: ಹೆಚ್‌ಡಿಕೆ ಕಿಡಿ

ರಾಜ್ಯದ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿಯನ್ನು ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ  ಕುಮಾರಸ್ವಾಮಿ  ಕಿಡಿ ಕಾರಿದ್ದಾರೆ.  ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ತಮ್ಮ ಕ್ಷೇತ್ರದಲ್ಲಿ  ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮದ 100ನೇ ವಾರದ ಸಮಾರಂಭವವನ್ನು ಉದ್ಘಾಟಿಸಿ  ಮಾತನಾಡಿದರು.

ಜನರು ಬುದ್ಧಿವಂತರಾಗಬೇಕು. ಇನ್ನೊಬ್ಬರಿಗೆ ಕೊಡುವ ಶಕ್ತಿ ತಮಗೆ ಬರದೇ ಇರುವ ಬಗ್ಗೆ ಅವರು ಆಲೋಚನೆ ಮಾಡಬೇಕು. ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸು ಎಂದರೆ ತಾನು ಒಬ್ಬರ ಮುಂದೆ ಕೈಚಾಚುವುದು ಅಲ್ಲ, ಇನ್ನೊಬ್ಬರಿಗೆ ಕೊಡುವುದು ಎಂದು ಕೇಂದ್ರ ಸಚಿವರು ಹೇಳಿದರು. ಪರೋಕ್ಷವಾಗಿ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ  ಅತೃಪ್ತಿ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಜನರನ್ನು ಶಾಶ್ವತವಾಗಿ ಆರ್ಥಿಕ ಸಬಲರನ್ನಾಗಿ ಮಾಡುವಷ್ಟು ಸಂಪನ್ಮೂಲ ರಾಜ್ಯದಲಿದೆ ಎಂದು ಎಂದಷ್ಟೇ ನಾನು ಹೇಳುತ್ತಿದ್ದೇನೆ ಎಂದರು.

ಅಭಿವೃದ್ಧಿ ಎನ್ನುವುದು ಪ್ರಚಾರದಲ್ಲಿ ಮಾತ್ರ ಕಾಣುತ್ತಿದೆ. ಕೇವಲ ಜಾಹೀರಾತುಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೂರಾರು ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡಿ ಜಾಹೀರಾತು ನೀಡಲಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಈಗ ನೋಡಿದರೆ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ ಎಂದು ಟೀಕಿಸಿದರು.

ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು ಎಂದು ನಾನು ನಂಬಿದ್ದೇನೆ. ಕೇವಲ ರಾಜಕೀಯ ಲಾಭದ ಭರವಸೆಗಳಿಂದ ಜನರಿಗೆ ಉಪಯೋಗವಿಲ್ಲ. ಅವರನ್ನು ಶಾಶ್ವತವಾಗಿ ಮೇಲೆತ್ತುವ ಕೆಲಸ ಆಗಬೇಕಿದೆ. ಕೃಷಿಕರಿಗೆ ಶಕ್ತಿ ತುಂಬಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೌಲಭ್ಯಗಳು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿರಬೇಕು. ಆದರೆ, ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ಪ್ರತೀ ಸರ್ಕಾರಿ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ನಾವು ಜಾತ್ಯತೀತರು ಎಂದು ಹೇಳುತ್ತೇವೆ. ಆದರೆ, ಅದಾದ ಮೇಲೆ ಜಾತಿ ಹೆಸರಿನ ಮೇಲೆ ರಾಜಕೀಯ ಮಾಡುತ್ತೇವೆ. ಇವತ್ತು ರಾಜಕೀಯ ಲಾಭಕ್ಕಾಗಿ, ಮೀಸಲಾತಿಗಾಗಿ ಜಾತಿಗಳನ್ನು ಒಡೆಯಲಾಗುತ್ತಿದೆ. ಆಮೇಲೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಈ ವೈರುಧ್ಯಕ್ಕೆ ಏನು ಹೇಳುವುದು ಎಂದು ಅವರು ಬೇಸರ ಹೊರ ಹಾಕಿದರು.

ಜನತೆ ಜಾತಿಯ ವ್ಯಾಮೋಹದಿಂದ ಹೊರಬರದೇ ಹೋದರೆ ಅಭಿವೃದ್ಧಿ ಎಂಬುದು ಮರೀಚಿಕೆ ಆಗುತ್ತದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿಯೂ ನಮ್ಮ ಜಾತಿ ರಾಜಕಾರಣ ನಡೆಯುತ್ತಿದೆ ಎಂದು ಅವರು ಹೇಳಿದರು.

ಶ್ರೀ ಶಂಭುನಾಥ ಸ್ವಾಮೀಜಿ,  ಶ್ರೀ ಡಾ. ಬಸವ ರಮಾನಂದ ಸ್ವಾಮೀಜಿ , ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ಸಚಿವ ವಿ. ಸೋಮಣ್ಣ , ಶಾಸಕ ಎಂ.ಟಿ. ಕೃಷ್ಣಪ್ಪ , ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಸೇರಿದಂತೆ ಮಾಜಿ ಶಾಸಕರು,  ಗಣ್ಯರು, ಕ್ಷೇತ್ರದ ಜನರು  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related Posts

Leave a Reply

Your email address will not be published. Required fields are marked *