Wednesday, February 11, 2026
Menu

ರಾಜ್ಯ ಬಜೆಟ್‌ನಲ್ಲಿ ಮತ್ತಷ್ಟು ಗ್ಯಾರಂಟಿ ಸ್ಕೀಂ?

ರಾಜ್ಯದ ಮುಂಬರುವ ಹಣಕಾಸು ಸಾಲಿನ ಬಜೆಟ್‌ನಲ್ಲಿ ಒಂದಷ್ಟು ಗ್ರಾಮೀಣರಿಗೆ ಮತ್ತು ಕೆಲವಷ್ಟು ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯೊಳಗೆ ವಾಸವಾಗಿರುವ ಪ್ರಜೆಗಳಿಗೆ ನೆರವಾಗುವಂತಹ ಜನಪ್ರಿಯ ಯೋಜನೆಗಳು ಆದ್ಯತೆ ಪಡೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆಯ-ವ್ಯಯ ಮಂಡನೆಯ ದಿನವನ್ನು ಘೋಷಿಸುವುದಾಗಿ ಹೇಳಿದ್ದಾರೆ. ಮುಂದಿನ ಆರ್ಥಿಕ ಸಾಲಿನ ರಾಜ್ಯದ ವಿವಿಧ ಬಾಬ್ತಿನ ಆದಾಯ ಮತ್ತು ಖರ್ಚುಗಳಲ್ಲದೆ ಸಂಪನ್ಮೂಲ ಕ್ರೋಢಿಕರಣ- ಇತ್ಯಾದಿಗಳ ಕೂಲಂಕಷ ಪರಿಶೀಲನೆಯೀಗ ಅಧಿಕಾರಿಗಳ ಮಟ್ಟದಲ್ಲಿ ಮುಂದುವರಿದಿದೆ.

ಕಾಂಗ್ರೆಸ್ ಆಡಳಿತಾವಧಿಯ ಕಳೆದ ಮೂರು ವರ್ಷಗಳಲ್ಲಿ ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ, ಪಂಚ ಗ್ಯಾರಂಟಿಗಳಿಗೆ ಒತ್ತು ನೀಡಿದ್ದು ಗಮನಾರ್ಹ. ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ಅಜೆಂಡಾ ಅಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ. ಮಹಿಳೆ, ಯುವಕ ಮತ್ತು ಸಮಾಜದ ದುರ್ಬಲ ಸಮುದಾಯದತ್ತ ದೃಷ್ಟಿ ಹರಿಸಿರುವ ಕಾಂಗ್ರೆಸ್ ಮತ್ತು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಜನಪ್ರಿಯ ಆಡಳಿತಕ್ಕೆ ಬುನಾದಿ ಹಾಕಲು ಯತ್ನಿಸಿದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಸವಾಗಿರುವ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನತೆಗೆ ಅನುಕೂಲಕರವಾದ ಉಚಿತ ಕರೆಂಟ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಲ್ಲದೆ ಬಿಪಿಎಲ್ ಕಾರ್ಡುದಾರರಿಗೆ ಉಚಿತ ರೇಷನ್‌ಅಂತಹ ರಾಜ್ಯ ಸರ್ಕಾರದ ಯೋಜನೆಗಳಿಂದ ಸರ್ಕಾರ ಜನತೆಯ ನಂಬಿಕೆ ಮತ್ತು ವಿಶ್ವಾಸವನ್ನು ಕಾಪಾಡಿಕೊಳ್ಳಲು ಯತ್ನಿಸಿದೆ.

ಈ ಸಾರಿಯ ರಾಜ್ಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಕೆಲವೊಂದು ಯೋಜನೆಗಳು ಆದ್ಯತೆ ಪಡೆಯುವ ಸಾಧ್ಯತೆಗಳಿವೆ. ಉಚಿತ ರೇಷನ್ ಮತ್ತು ಮಹಿಳೆಯರ ಉಚಿತ ಬಸ್ ಪ್ರಯಾಣದ ಜೊತೆಗೆ ಹೆಚ್ಚುವರಿಯಾಗಿ ಇನೂ ಒಂದೆರೆಡು ಜನಪ್ರಿಯ ಯೋಜನೆಗಳು ಈ ಬಜೆಟ್‌ನಲ್ಲಿ ಉಲ್ಲೇಖವಾದರೂ ಅಚ್ಚರಿಯಿಲ್ಲ. ಇಂತಹ ನೂತನ ಯೋಜನೆಗಳಿಗೆ ಅನುದಾನದ ಕೊರತೆಯಾಗದಂತೆ ಆರ್ಥಿಕ ಸಮತೋಲನ ಕಾಪಾಡುವ ಗುರುತರ ಹೊಣೆಗಾರಿಕೆಯೂ ಸಿದ್ದರಾಮಯ್ಯ ಅವರ ಹೆಗಲ ಮೇಲಿದೆ.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನಗಳ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಪೂರ್ಣ ಸಹಮತವಿಲ್ಲ. ಮೊನ್ನೆ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯಗಳೀಗ ೧.೪ ಲಕ್ಷ ಕೋಟಿ ಅನುದಾನ ಪಡೆಯಲು ಅರ್ಹತೆ ಹೊಂದಿದೆ. ಆದರೆ ಕೇಂದ್ರ ವಿತ್ತ ಮಂತ್ರಿ ಘೋಷಣೆ ಅನ್ವಯ ಬಿಜೆಪಿಯೇತರ ರಾಜ್ಯವಾದ ಕರ್ನಾಟಕವು ಈ ದಿಶೆಯಲ್ಲಿ ತನ್ನ ಪಾಲಿನ ಅನುದಾನಕ್ಕೆ ಸುಪ್ರೀಂಕೋರ್ಟ್ ಮೆಟ್ಟಲು ಹತ್ತಬೇಕಾಗುವುದೇ ಎಂಬ ಆತಂಕವೂ ಇದೆ. ಸಿದ್ದರಾಮಯ್ಯ ಅವರೆಷ್ಟೇ ಪತ್ರಗಳನ್ನು ಬರೆದರೂ, ಕೇಂದ್ರ ಮಂತ್ರಿ ಮಂಡಲವು ಈ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗಳಿಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡುವುದು ಅನುಮಾನ.

ಒಟ್ಟಿನಲ್ಲಿ ರಾಜ್ಯದ ಮುಂಬರುವಸಾಲಿನ ಬಜೆಟ್‌ನಲ್ಲಿ ಒಂದಷ್ಟು ಗ್ರಾಮೀಣರಿಗೆ ಮತ್ತು ಕೆಲವಷ್ಟು ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯೊಳಗೆ ವಾಸವಾಗಿರುವ ಪ್ರಜೆಗಳಿಗೆ ನೆರವಾಗುವಂತಹ ಜನಪ್ರಿಯ ಯೋಜನೆಗಳು ಆದ್ಯತೆ ಪಡೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

Related Posts

Leave a Reply

Your email address will not be published. Required fields are marked *