ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯನವರು, ರಾಜ್ಯ ಕಂಡ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರ ಜನ್ಮ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರು ಒಬ್ಬ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಸುಂದರವಾದ ಭವ್ಯವಾದ ವಿಧಾನಸೌಧ ನಿರ್ಮಿಸಿದ ಕೀರ್ತಿ ಅವರಿ ಗೆ ಸಲ್ಲುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಯಕರಾಗಿ, ಕೇಂದ್ರದ ರೈಲ್ವೆ ಮಂತ್ರಿಯಾಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಂವಿಧಾನ ರಚನಾ ಸಮಿತಿಗೆ ಅಮೂಲ್ಯ ಸಲಹೆಗಳನ್ನು ನೀಡಿ, ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದಂತಹ ಧೀಮಂತ ರಾಜಕಾರಣಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿದ್ದರು. ಹನುಮಂತಯ್ಯನವರು ವಿಧಾನಸೌಧಕ್ಕೆ ಬುನಾದಿ ಹಾಕಿದರಾದರೂ, ಉದ್ಘಾಟನೆಯ ಸಂದರ್ಭ ದಲ್ಲಿ ಅವರು ಮುಖ್ಯಮಂತ್ರಿಯಾಗಿರಲಿಲ್ಲವೆಂಬುದು ನೋವಿನ ಸಂಗತಿ. ಅವರ ಆದರ್ಶ ಮತ್ತು ಸಿದ್ದಾಂತಗಳು ಎಲ್ಲರಿಗೂ ಮಾರ್ಗದರ್ಶನ ನೀಡುತ್ತವೆ ಎಂದರು.
ಮತಪರಿಷ್ಕರಣೆಯ ಎಸ್ ಐ ಆರ್ ಕಾರ್ಯಕ್ಕೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುಪ್ರೀಂ ಕೋರ್ಟ್ ನವರು ಯಾವ ಸಂದರ್ಭಕ್ಕೆ ಹೀಗೆ ಹೇಳಿದ್ದಾರೆ ಎಂಬ ಮಾಹಿತಿ ಪಡೆದು, ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಬಜೆಟ್ ಸಿದ್ಧತ ಸಭೆಯಲ್ಲಿ ಡಿಸಿಎಂ ಹಾಜರಾಗುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅಸ್ಸಾಂ ರಾಜ್ಯದಲ್ಲಿ ಸಭೆಯೊಂದಕ್ಕೆ ಹಾಜರಾಗಬೇಕಾದ ಕಾರಣ ಬಜೆಟ್ ಸಿದ್ಧತೆ ಸಭೆಯಲ್ಲಿ ಭಾಗವಹಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿರುವುದಾಗಿ ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ , ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ವರಿಷ್ಠರು ಬಯಸಿದರೆ ಮಾತ್ರ ದೆಹಲಿಗೆ ತೆರಳುವುದಾಗಿ ಸಿದ್ದರಾಮಯ್ಯ ಉತ್ತರಿಸಿದರು. ಶಾಸಕ ಯತೀಂದ್ರ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ , ಬಿಜೆಪಿ ಪಕ್ಷದವರೇ ತಮ್ಮ ಪಕ್ಷದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡಲಿಲ್ಲ ಎಂದರು.


