ಚಿತ್ರದುರ್ಗ: ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಸಿರಿಗೆರೆಯ ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಎಂ. ರಂಗಣ್ಣ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಆರೋಪಿ ಎಂ.ರಂಗಣ್ಣ ಸಿರಿಗೆರೆಯ ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದು, 10ನೇ ತರಗತಿಯ ಆರು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೊಠಡಿಗೆ ಕರೆಸಿ ಅಪ್ಪಿಕೊಳ್ಳುವುದು, ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸುವುದು, ಮುತ್ತು ಕೊಡುವುದು ಸೇರಿದಂತೆ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯಎಂ.ಎಸ್. ಸೋಮಶೇಖರ್ ಗೆ ಸಲ್ಲಿಸಲಾದ ಲಿಖಿತ ದೂರಿನಲ್ಲಿ ವಿವರಿಸಲಾಗಿದೆ.
ಮುಖ್ಯೋಪಾಧ್ಯಾಯರು ಈ ಕುರಿತು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುವಂತೆ ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಆರು ವಿದ್ಯಾರ್ಥಿನಿಯರು, ಇಬ್ಬರು ಶಿಕ್ಷಕಿಯರು ಹಾಗೂ ಮುಖ್ಯೋಪಾಧ್ಯಾಯರಿಂದ ಹೇಳಿಕೆ ಪಡೆದುಕೊಳ್ಳಲಾಗಿದ್ದು, ಆರೋಪಗಳು ಸತ್ಯವೆಂದು ವಿಶೇಷಾಧಿಕಾರಿಗಳು ವರದಿ ಸಲ್ಲಿಸಿದ್ದರು.
ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ನಿವೃತ್ತ ಸಹ ನಿರ್ದೇಶಕ ಹೆಚ್. ಮಂಜುನಾಥ್ ಅವರನ್ನು ವಿಚಾರಣಾಧಿಕಾರಿಯಾಗಿ ಹಾಗೂ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎನ್.ಆರ್. ತಿಪ್ಪೇಸ್ವಾಮಿ ಅವರನ್ನು ಇಲಾಖಾ ಪ್ರತಿನಿಧಿಯಾಗಿ ನೇಮಿಸಿ ವಿಚಾರಣಾ ಸಮಿತಿಯನ್ನು ರಚಿಸಿತ್ತು. ವಿಚಾರಣೆಯ ಬಳಿಕ 05 ನವಂಬರ್ 2025ರಂದು ಆರೋಪಗಳು ಸಾಬೀತಾಗಿವೆ ಎಂದು ಸಮಿತಿ ಅಂತಿಮ ವರದಿ ಸಲ್ಲಿಸಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕನಿಂದ ಜನವರಿ ೧೦, 2026ರಂದು ಲಿಖಿತ ಹೇಳಿಕೆ ಪಡೆಯಲಾಗಿತ್ತು.
ವಿದ್ಯಾರ್ಥಿನಿಯರ ತಾಯಂದಿರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ತನಿಖಾ ವರದಿಯಲ್ಲಿ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿ ಶಿಕ್ಷಕ ಎಂ. ರಂಗಣ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯರಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಸಂಬಂಧಿತ ವಿಶೇಷ ಕಾಯ್ದೆಗಳ ಅಡಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


