ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಸೇರಿ ಆ ಮನೆಯನ್ನು ದರೋಡೆ ಮಾಡುವ ನೇಪಾಳದ ಗ್ಯಾಂಗ್ ಸಕ್ರಿಯವಾಗಿರುವುದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ.
ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.
ಈ ದರೋಡೆ ಪ್ರಕರಣದಲ್ಲಿ ನೇಪಾಳ ಮೂಲದ ಗ್ಯಾಂಗ್ ಇರುವುದು ಗೊತ್ತಾಗಿದೆ. ನೇಪಾಳದ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗೆಲಸಕ್ಕೆ ಸೇರಿ ಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ದರೋಡೆ ಮಾಡುವ ಒಂದು ತಿಂಗಳ ಮೊದಲು ವೈಯಕ್ತಿಕ ಕಾರಣದ ನೆಪ ಹೇಳಿ ಕೆಲಸ ಬಿಡುತ್ತಿದ್ದರು. ಕೆಲಸ ಬಿಡುವುದಕ್ಕೂ ಮೊದಲು ಇದೇ ಗ್ಯಾಂಗ್‌ಗೆ ಸೇರಿರುವ ಇಬ್ಬರನ್ನು ಕೆಲಸಕ್ಕೆ ಸೇರಿಸಿ ಹೋಗುತ್ತಾರೆ.
ಅದೇ ರೀತಿ ನಗರದ ಉದ್ಯಮಿ ಶಿವಕುಮಾರ್ ಅವರ ಮನೆಗೂ ಗ್ಯಾಂಗ್‌ನ ಕಮಲ ಹಾಗೂ ದಿನೇಶ್ ಎಂಬವರನ್ನು ಕೆಲಸಕ್ಕೆ ಸೇರಿಸಲಾಗಿತ್ತು. ಈ ದಂಪತಿ ಉದ್ಯಮಿಯ ಮನೆ ದರೋಡೆ ಮಾಡಿ ಪರಾರಿಯಾಗಿತ್ತು. ಡಿಸೆಂಬರ್‌ನಲ್ಲಿ ದಿನೇಶ್ ಮತ್ತು ಗ್ಯಾಂಗ್ ಪುಣೆಯಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಈ ನೇಪಾಳ ಮೂಲದ ಗ್ಯಾಂಗ್ ಬಗ್ಗೆ ಮಾಹಿತಿ ಕಲೆಹಾಕಿದ್ದು, ಎಲ್ಲ ವಂಚಕ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.


