ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಮಕ್ಕಳಿಗೆ ಕೂಡ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಅರ್ಚನಾ ಭಟ್ ಕೆ. 2023ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಗುರುವಾರ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138 ಅನ್ನು ಜಾರಿಗೆ ತರಲು ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿತು.
ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ವಾಸ್ತವವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.
ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಮಕ್ಕಳು ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೋರ್ಟ್ ಸೂಚಿಸಿತು.
ಮಾರುಕಟ್ಟೆಯಲ್ಲಿ ಸುರಕ್ಷತಾ ಪರಿಕರಗಳ ಲಭ್ಯತೆ ಖಚಿತಪಡಿಸಿಕೊಂಡ ಬಳಿಕ ರಾಜ್ಯದಲ್ಲಿ ನಿಯಮವನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಪೀಠ 6 ತಿಂಗಳ ಕಾಲಾವಕಾಶವನ್ನು ನೀಡಿತು. ಜೊತೆಗೆ 9 ತಿಂಗಳಿಂದ ನಾಲ್ಕು ವರ್ಷದೊಳಗಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ.
ಸರ್ಕಾರದ ಪರ ವಕೀಲರು, ತಯಾರಕರಿಂದ ಪಡೆದ ಮಾಹಿತಿಯನ್ನು ಉಲ್ಲೇಖಿಸಿ, ಹೊಸ ಸುರಕ್ಷತಾ ಪರಿಕರಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೊದಲು ಪರೀಕ್ಷೆಗಳಿಗೆ ಒಳಗಾಗಬೇಕಾಗಿದೆ. ಆದ್ದರಿಂದ ಅವುಗಳ ತಯಾರಿಕೆಗೆ ಸಮಯ ಅಗತ್ಯವಿದೆ ಎಂದು ಪೀಠಕ್ಕೆ ತಿಳಿಸಿದರು.
ಹೊಸ ನಿಯಮಗಳು:
ಮಕ್ಕಳಿಗಾಗಿ ಸುರಕ್ಷತಾ ಪರಿಕರಗಳನ್ನು ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2022ರ ಸೆಕ್ಷನ್ 138(7)ರ ಮೂಲಕ ಪರಿಚಯಿಸಲಾಗಿದೆ, ಇದನ್ನು ಫೆಬ್ರವರಿ 15, 2022ರಂದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ಅಡಿ ಸೂಚಿಸಲಾಗಿದೆ. ಸುರಕ್ಷತಾ ಸಲಕರಣೆಗಳ ಜೊತೆಗೆ, ನಾಲ್ಕು ವರ್ಷ ವಯಸ್ಸಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ಸೈಕಲ್ನ್ನು ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿರಬಾರದು ಎಂದು ಹೊಸ ನಿಯಮಗಳು ತಿಳಿಸಲಿವೆ.
9 ತಿಂಗಳಿಗಿಂತಲೂ ಹೆಚ್ಚು ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಸುರಕ್ಷತಾ ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.


