Menu

ಉಗಾಂಡಾದಲ್ಲಿ ವಿಜಯನಗರದ ಮಹಿಳೆ ಆತ್ಮಹತ್ಯೆ: ಮೃತದೇಹ ತರಿಸಲು ನೆರವಾದ ಸಿರಿಗೆರೆ ಶ್ರೀ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಮಹಿಳೆ ಉಗಾಂಡಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಂದು ಎಚ್. ಅಜ್ಜೋಳ (22) ಆತ್ಮಹತ್ಯೆ ಮಾಡಿಕೊಂಡವರು. ಬಿಂದು ಮತ್ತು ಚಂದ್ರಶೇಖರ್ ಪ್ರೀತಿಸಿ 2025ರ ಜೂನ್ 7 ರಂದು ಮದುವೆಯಾಗಿದ್ದರು. ಬಳಿಕ ಉಗಾಂಡದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದ ದಂಪತಿ ಜುಲೈನಲ್ಲಿ ಅಲ್ಲಿಗೆ ತೆರಳಿದ್ದರು.

ಬಿಂದು ಅವರು ದಿ. ಎ. ಹಾಲಪ್ಪ ಮತ್ತು ಮಂಜುಳಾ ದಂಪತಿಯ ಮಗಳು. ಪ್ರತಿದಿನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ನಡೆದ ದಿನ ಮಧ್ಯಾಹ್ನ ಊಟಕ್ಕೆ ಬರುವಂತೆ ಪತಿಗೆ ಕರೆ ಮಾಡಿದ್ದರು. ಪತಿ ಮನೆಗೆ ಬಂದಾಗ ಬಿಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಜರ್ಮನಿ ಪ್ರವಾಸದಲ್ಲಿದ್ದ ಸಿರಿಗೆರೆ ತರಳಬಾಳು ಪೀಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೃತದೇಹವನ್ನು ತಾಯ್ನಾಡಿಗೆ ತರಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

ಉಗಾಂಡದ ಕಂಪಾಲ ನಗರದಲ್ಲಿ ಮರಣೋತ್ತರ ಪರೀಕ್ಷೆ ಸೇರಿದಂತೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮೃತದೇಹ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *