Menu

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು, ಇಂಡಿ ಕೂಟಕ್ಕೆ ಕಪಾಳಮೋಕ್ಷ: ಸಂಸದ ಡಾ.ಕೆ.ಸುಧಾಕರ್

ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನರು ನೀಡಿರುವ ಮೆಚ್ಚುಗೆ ಹಾಗೂ ದೇಶವಿರೋಧಿ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟಕ್ಕೆ ಜನರು ಕೊಟ್ಟಿರುವ ಕಪಾಳಮೋಕ್ಷವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟಕ್ಕೆ ದೊರೆತಿರುವ ಭರ್ಜರಿ ಜಯ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯವನ್ನು ಜನರು ಮೆಚ್ಚಿರುವ ಸಂಕೇತ. ಕಳೆದ‌ ಲೋಕಸಭಾ ಚುನಾವಣೆಯಿಂದಲೇ ಇಂಡಿ ಕೂಟವನ್ನು ರಚಿಸಿಕೊಂಡ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಬಿಜೆಪಿಯ ಕಡೆಗಿನ ಜನರ ಒಲವನ್ನು ಒಡೆಯಲು ನೋಡಿದ್ದವು. ಆದರೆ ಇಂಡಿ ಕೂಟ ಎನ್ನುವುದೇ ಅತಿ ದೊಡ್ಡ ವಿಫಲ ಹೆಜ್ಜೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ದುರಾಡಳಿತ, ಕೋಮು ರಾಜಕಾರಣ, ಗೂಂಡಾಗಿರಿ, ಕೈಗಾರಿಕಾ ವಿರೋಧಿ ನೀತಿಗಳು, ಬಾಂಗ್ಲಾದ ಅಕ್ರಮ ವಲಸಿಗರ ಹಿತ ಕಾಯುವ ನೀತಿಗಳಿಂದ ಬೇಸತ್ತ ಜನರು ಎನ್ ಡಿಎ ಗೆ ಆಶೀರ್ವದಿಸಿ ಟಿಎಂಸಿಯನ್ನು ಕಿತ್ತೊಗೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದೀದಿ ಹೇಳಿದ್ದೇ ನಡೆಯುತ್ತದೆ ಎಂಬ ಸರ್ವಾಧಿಕಾರಕ್ಕೆ ಬಿಜೆಪಿ ಅಂತ್ಯ ಹಾಡಿದೆ. ಪಶ್ಚಿಮ ಬಂಗಾಳದ ಇತಿಹಾಸವೇ  ನೆನಪಿಟ್ಟುಕೊಳ್ಳುವ  ಮ್ಯಾಜಿಕ್ ಅನ್ನು ಬಿಜೆಪಿ ನೇತೃತ್ವದ ಎನ್ ಡಿಎ ಮಾಡಿದೆ. ಇನ್ನು ಮುಂದೆ ಬಿಜೆಪಿ ಆಡಳಿತದ ಉಳಿದ ರಾಜ್ಯಗಳಂತೆ ಪಶ್ಚಿಮ ಬಂಗಾಳ ಕೂಡ ವಿಕಸಿತದ ಹಾದಿಯಲ್ಲಿ ಸರಾಗವಾಗಿ ಸಾಗಲಿದೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ನ ಗೆಳೆಯರಾದ ಎಂ.ಕೆ.ಸ್ಟಾಲಿನ್ ತಂಡಕ್ಕೆ ತೀವ್ರ ಮುಖಭಂಗವಾಗಿದ್ದು, ಎಐಎಡಿಎಂಕೆ ನೇತೃತ್ವದ ಎನ್ ಡಿಎ ಕೂಟಕ್ಕೆ ಅಭೂತಪೂರ್ವ ವಿಜಯ ಸಿಕ್ಕಿದೆ. ಅಸ್ಸಾಂ ಹಾಗೂ ಪುದುಚೇರಿಯಲ್ಲೂ ಕಮಲ ಅರಳಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ಅಭಿವೃದ್ಧಿ ಮಾಡದೆ ಲೂಟಿಯಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ದೊಡ್ಡ ಪಾಠವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಫಲಿತಾಂಶ ಬಂದು ಕಾಂಗ್ರೆಸ್ ನ ಲಜ್ಜೆಗೆಟ್ಟ ಜನವಿರೋಧಿ ಆಡಳಿತ‌ ಕೊನೆಯಾಗಲಿದೆ. ಅಧಿಕಾರದ ಮದದಲ್ಲಿ ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದನ್ನು‌ ನೋಡಿಯಾದರೂ ಕಾಂಗ್ರೆಸ್ ಪಾಠ ಕಲಿಯಬೇಕಿದೆ ಎಂದು  ಹೇಳಿದ್ದಾರೆ.

ಬಿಜೆಪಿ ಸೇರಿದಂತೆ ಎನ್ ಡಿಎ ಕೂಟಕ್ಕೆ ಬೆಂಬಲ‌ ನೀಡಿ ಹಾರೈಸಿದ ಮತದಾರ ಬಂಧುಗಳಿಗೆ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಹಾಗೂ ಕೋಟ್ಯಂತರ ಕಾರ್ಯಕರ್ತರಿಗೆ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *