ಬೆಂಗಳೂರಿನ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿ ಗಲಾಟೆ ಮಾಡಿಕೊಂಡು ಸಸ್ಪೆಂಡ್ ಆಗಿರುವುದರಿಂದ ಆತಂಕಗೊಂಡ ತಾಯಿ ಅದೇ ಶಾಲೆಯ ಶೌಚಾಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ.
ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ, ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಿರುವ ಶಾಲೆಯ ಆಡಳಿತ ಮಂಡಳಿ ಮರುಪ್ರವೇಶ ನಿರಾಕರಿಸಿದೆ. ಇದರಿಂದ ನೊಂದು ಕಂಗೆಟ್ಟ ತಾಯಿ ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿದ್ದಾರೆ.
10ನೇ ತರಗತಿ ವಿದ್ಯಾರ್ಥಿ ಮತ್ತು 9ನೇ ತರಗತಿ ವಿದ್ಯಾರ್ಥಿಯ ನಡುವೆ ಜಗಳವಾಗಿದೆ. ಇಬ್ಬರೂ ಪರಸ್ಪರ ಹಲ್ಲೆ ನಡೆಸಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಘಟನೆ ಬಳಿಕ ಎರಡು ಕುಟುಂಬಗಳು ಮಾತುಕತೆ ನಡೆಸಿ ಪರಸ್ಪರ ರಾಜಿ ಮಾಡಿಕೊಂಡಿದ್ದರು. ಶಾಲೆ ಆಡಳಿತ ಮಂಡಳಿ ಮಾತ್ರ ಹತ್ತನೇ ತರಗತಿ ವಿದ್ಯಾರ್ಥಿ ಮೇಲೆ ಕ್ರಮ ತೆಗೆದುಕೊಂಡಿದೆ ಎನ್ನುವ ಆರೋಪವಿದೆ.
10ನೇ ತರಗತಿ ವಿದ್ಯಾರ್ಥಿಯ ತಾಯಿಯೇ ಮತ್ತೊಬ್ಬ ಯುವಕನ ವೈದ್ಯಕೀಯ ವೆಚ್ಚವನ್ನೂ ಭರಿಸಿದ್ದಾರೆ. ಕುಟುಂಬದ ಮನವಿಗೆ ಸಮ್ಮತಿಸಿ, ಭಾರತಿನಗರ ಪೊಲೀಸ್ ಠಾಣೆಯ ಅಧಿಕಾರಿ ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿದ್ದು, ಮತ್ತೆ ಶಾಲೆಗೆ ಸೇರಿಸಿಕೊಲ್ಳುವಂತೆ ಕೋರಿದ್ದರೂ ಶಾಲೆಯವರು ಒಪ್ಪಿಲ್ಲ. ಬಳಿಕ ತಾಯಿಯೇ ಪತಿಯೊಂದಿಗೆ ಶಾಲೆಗೆ ತೆರಳಿ ಮನವಿಗೆ ಮಾಡಿದ್ದಾರೆ. ಆದರೆ ಆಡಳಿತ ಮಂಡಳಿ ಒಪ್ಪಿಲ್ಲ.
ನೊಂದ ತಾಯಿ ಸುಮಿತ್ರಾ ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿದ್ದಾರೆ, ತಕ್ಷಣ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ರಿಚ್ಮಂಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.


