ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿರುವ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ೫೯ನೇ ಸಿಸಿಹೆಚ್ ಕೋರ್ಟ್ ಮುಂದೂಡಿದೆ.
ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ಇನ್ನೂ ಆದೇಶ ಹೊರ ಬಂದಿಲ್ಲವಾದ್ದರಿಂದ ವಿಚಾರಣೆಗೆ ಹೆಚ್ಚಿನ ಸಮಯ ನೀಡಬೇಕು, ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮನವಿಯನ್ನು ಪರಿಗಣಿಸಿದ ಕೋರ್ಟ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿದೆ. ಆರೋಪಿ ಪ್ರದೋಷ್‌ನನ್ನು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯಕ್ಕೆ ಆಗಮಿಸಿದ ಪ್ರದೋಷ್, ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಸಹಿ ಮಾಡಿ ಬಂದರು. ವಿಚಾರಣೆ ಮುಂದೂಡಿಕೆಯಾದ ಹಿನ್ನೆಲೆ ಪೊಲೀಸರು ಪ್ರದೋಷ್‌ನನ್ನು ಮತ್ತೆ ಜೈಲಿಗೆ ಕಳುಹಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ದಿನ ಪ್ರದೋಷ್ ಸ್ಟೋನಿ ಬ್ರೂಕ್‌ನಿಂದ ದರ್ಶನ್ ಜೊತೆ ಶೆಡ್‌ಗೆ ಹೋಗಿದ್ದ. ಹಲ್ಲೆ ಮಾಡುವಾಗ ಸ್ಥಳದಲ್ಲಿಯೇ ಇದ್ದ ಆತ ರೇಣುಕಾಸ್ವಾಮಿಗೆ ʼಹೊಡೆಯೋದು ಸಾಕು ನಿಲ್ಲಿಸಿ, ಸತ್ತು ಹೋಗ್ತಾನೆʼ ಎಂದಿದ್ದ ಎಂಬುದು ಪೊಲೀಸರ ಹೇಳಿಕೆಯಲ್ಲಿದೆ. ಶವ ಸಾಗಿಸುವ ಸಲುವಾಗಿ ಸಬ್ ಇನ್ಸ್ಪೆಕ್ಟರ್‌ಗೆ ಪ್ರದೋಷ್ ಫೋನ್ ಮಾಡಿದ್ದ. ಶವ ಸಾಗಾಟದ ತನಕವೂ ದರ್ಶನ್ ಜೊತೆಯಲ್ಲಿಯೇ ಇದ್ದ ಎಂದು ಹೇಳಲಾಗಿದೆ.


