Menu

ಪತ್ನಿ, ಮಕ್ಕಳ ಕರೆದೊಯ್ಯಲು ಹೋದವನ ಮೇಲೆ ಪೆಟ್ರೋಲ್‌ ಹಾಕಿ ಸುಟ್ಟ ಅತ್ತೆ ಮಾವ

ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಅಳಿಯನ ಮೇಲೆ ಅತ್ತೆ-ಮಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

25 ವರ್ಷದ ನವೀನ್ ಅತ್ತೆ ಮಾವನಿಂದ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನವೀನ್‌ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನವೀನ್ ಸಾಯುವ ಮೊದಲು ಕೃಷ್ಣಗಿರಿ ಆಸ್ಪತ್ರೆಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿ, ನನ್ನ ಮೇಲೆ ಮಾವ ಸಂಪಂಗಿ, ಬಾಮೈದ ಮುನೇಶ್, ಅತ್ತೆ ಪಚ್ಚಮ್ಮ ಹಾಗೂ ಪತ್ನಿ ಸುಚಿತ್ರಾ ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಹೇಳಿಕೆ ಅನ್ವಯ ಆನೇಕಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೀನ್ ದಂಪತಿ ಆನೇಕಲ್-ತಳಿ ರಸ್ತೆಯ ಚೂಡೇನಹಳ್ಳಿಯಲ್ಲಿ ವಾಸವಾಗಿದ್ದರು. ನವೀನ್ ಮದ್ಯ ವ್ಯಸನಿಯಾಗಿದ್ದು ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ.

ಹಲವು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು. ಯುಗಾದಿ ಹಬ್ಬದ ನೆಪದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿ ಹಲವು ದಿನ ಕಳೆದರೂ ಬಂದಿರಲಿಲ್ಲ. ಪತ್ನಿ-ಮಕ್ಕಳನ್ನು ವಾಪಸ್ ಕರೆತರಲು ಅತ್ತೆ ಮನೆಗೆ ಹೋದಾಗ ಜಗಳ ನಡೆದು ಹೀಗೆ ಕ್ರೂರವಾಗಿ ನವೀನ್‌ನ ಕೊಲೆ ಮಾಡಿದ್ದರು ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *