ಹೊಸದಾಗಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂದು ಯೋಚಿಸಿ ಅದಕ್ಕೆ ಹಣ ಹೊಂದಿಸಲು ಅಣ್ನನ ಮನೆಯಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ.
ವಿನಯ್ ಕುಮಾರ್ ಬಂಧಿತ ಆರೋಪಿ. ಸಂಬಂಧದಲ್ಲಿ ತಮ್ಮನಾಗಿರುವ ವಿನಯ್ ಹೋಟೆಲ್ ಮ್ಯಾನೇಜ್ಮೆಂಟ್ ಓದಿಕೊಂಡಿದ್ದ, ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದು ಹಣ ಹೊಂದಿಸಲು ಅಣ್ಣನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡುವ ಪ್ಲಾನ್ ರೂಪಿಸಿ ಕಾರ್ಯಗತಗೊಳಿಸಿದ್ದ.
ಅಣ್ಣ ಊರಿಗೆ ಹೋದ ದಿನ ತಿಳಿದುಕೊಂಡು ಆರೋಪಿ ಮನೆಗೆ ಬಂದಿದ್ದ, ಅತ್ತಿಗೆ ಎಂದಿನಂತೆ ಮಾತಾಡುತ್ತ ಮನೆಗೆಲಸ ಮಾಡುತ್ತಿದ್ದಳು, ಆಕೆ ಕಸಗುಡಿಸಿ ಹೊರಗೆ ಹಾಕಿಬರಲು ಹೋದಾಗ ಕೂಡಲೇ ಚಿನ್ನಾಭರಣ ಕದ್ದು ಮನೆಯಿಂದ ಹೊರ ಹೋಗಿದ್ದಾನೆ. ಕಸ ಹೊರಗೆ ಹಾಕಿ ಮನೆಯೊಳಗೆ ಬಂದಾಗ ಆರೋಪಿ ಇರಲಿಲ್ಲ, ಅನುಮಾನಗೊಂಡ ಅತ್ತಿಗೆ ಹುಡುಕಾಡಿದಾಗ ಆತ ಚಿನ್ನಾಭರಣ ಕದ್ದು ಪರಾರಿಯಾಗಿರುವುದು ಗೊತ್ತಾಗಿದೆ.
ಮೈದುನ ಚಿನ್ನಾಭರಣ ದೋಚಿ ಹೋಗಿರುವ ವಿಷಯ ಆಕೆ ಗಂಡನಿಗೆ ತಿಳಿಸಿದ್ದಾಳೆ. ಅಣ್ಣ ತಮ್ಮನಿಗೆ ಕರೆ ಮಾಡಿ ಚಿನ್ನಾಭರಣ ಕದ್ದಿರುವ ವಿಚಾರ ಪ್ರಶ್ನಿಸಿದ್ದಾನೆ. ವಾಪಸ್ ಕೊಡುವಂತೆ ಕೇಳಿದ್ದಾನೆ. ಆಗ ಆರೋಪಿ ಬ್ಯುಸಿನೆಸ್ ಮಾಡುತ್ತೇನೆ ಲಾಭ ಬಂದಮೇಲೆ ಕೊಡುತ್ತೇನೆ ಎಂದಿದ್ದಾನೆ. ಹೀಗಾಗಿ ಅಣ್ಣ ತಮ್ಮನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಪೊಲೀಸರು ಕಾರ್ಯಾಚರಣೆಗಿಳಿದು ಆರೋಪಿ ವಿನಯನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.


