Thursday, January 30, 2025
Menu

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಮಹಾಸಂಪನ್ನ: 25 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ದಾಸೋಹ

ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ ಕೊಪ್ಪಳದ ಗವಿಮಠದ ಜಾತ್ರೆಗೆ ವಿದ್ಯುಕ್ತವಾಗಿ ಮಹಾ ಸಂಪನ್ನಗೊಂಡಿದೆ. 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದಾಸೋಹದಲ್ಲಿ ಊಟ ಮಾಡಿದ್ದಾರೆ. ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ವೈಭವದಿಂದ ನಡೆದಿತ್ತು. ಅಂದು ಐದು ಲಕ್ಷ ಜನ ಭಾಗವಹಿಸಿದ್ದರು.

ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ 29ರಂದು ವಿದ್ಯುಕ್ತ ತೆರೆ ಬೀಳುವುದರೊಂದಿಗೆ ಜಾತ್ರೆಯ ಮಹಾದಾಸೋಹಕ್ಕೆ ಕೂಡ ತೆರೆಬಿದ್ದಿದೆ. ಕೊನೆಯ ದಿನವೂ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ. ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡು ಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಸೇವಿಸಿದ್ದಾರೆ.

ಒಂದೇ ದಿನ ನೂರು ಕ್ವಿಂಟಾಲ್‌ಗೂ ಅಧಿಕ ಅನ್ನ, ಎಪ್ಪತ್ತೈದು ಕ್ವಿಂಟಲ್ ಗೋದಿ ಹುಗ್ಗಿ ಮಾಡಲಾಗಿತ್ತು. ಗುರುವಾರದಿಂದ ಮಠದಲ್ಲಿ ದೈನಂದಿನಂತೆ ದಾಸೋಹ ನಡೆಯುತ್ತಿದೆ. ಹದಿನೆಂಟು ದಿನ ನಡೆದ ಮಹಾದಾಸೋಹದಲ್ಲಿ ಇಪ್ಪತ್ತು ಲಕ್ಷ ರೊಟ್ಟಿ, ಹನ್ನೆರಡು ನೂರು ಕ್ವಿಂಟಾಲ್ ಅಕ್ಕಿಯ ಅನ್ನ ಖರ್ಚಾಗಿದೆ. ಹತ್ತಾರು ಟನ್ ತರಕಾರಿ ಬಳಸಲಾಗಿದೆ. ಹತ್ತು ಲಕ್ಷಕ್ಕೂ ಅಧಿಕ ಜಿಲೇಬಿ, ಶೇಂಗಾ ಹೋಳಿಗೆ, ಮಾದಲಿ, ಮಿರ್ಚಿಯನ್ನು ಪ್ರಸಾದದಲ್ಲಿ ನೀಡಲಾಗಿತ್ತು. ಪ್ರತಿ ದಿನವು ಕೂಡ ಒಂದೊಂದು ರೀತಿಯ ಭಕ್ಷ್ಯ ಭೋಜನಗಳನ್ನು ಜಾತ್ರೆಗೆ ಬರುವ ಭಕ್ತರಿಗೆ ಮಹಾದಾಸೋಹದಲ್ಲಿ ಬಡಿಸಲಾಗಿದೆ. ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ವೈವಿಧ್ಯಮಯ ಆಹಾರ ಮತ್ತು ಲಕ್ಷ ಲಕ್ಷ ಜನರಿಗೆ ಅಚ್ಚುಕಟ್ಟು ಪ್ರಸಾದ ವ್ಯವಸ್ಥೆ ನಡೆದಿದೆ.

ಪ್ರತಿದಿನ ಲಕ್ಷಾಂತರ ಜನರು ಪ್ರಸಾದ ಸೇವನೆಗಾಗಿ ಬಂದರೂ ಒಂದು ದಿನವೂ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ನಿರಂತರ ಕುಡಿಯುವ ನೀರಿನ ಸರಬರಾಜು, ಬೆಳಕು, ನೆರಳಿನ ವ್ಯವಸ್ಥೆ, ಊಟಕ್ಕೆ ಬೇಕಾಗುವ ತಟ್ಟೆ ವ್ಯವಸ್ಥೆಗೊಳಿಸಲಾಗಿತ್ತು. ಸಾವಿರಾರು ಜನರು ಸ್ವಯಂ ಸೇವಕರಾಗಿ ಬಂದು ದಾಸೋಹದಲ್ಲಿ ಕೆಲಸ ನಿರ್ವಹಿಸಿದ್ದರು. ಜಾತ್ರೆಯಲ್ಲಿ ಪ್ರಸಾದಕ್ಕಾಗಿ ಅಡುಗೆ ಮಾಡುವುದು, ತರಕಾರಿ ಕತ್ತರಿಸುವುದು, ಊಟ ಬಡಿಸುವುದು ಎಲ್ಲವನ್ನೂ ಭಕ್ತರೇ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *