ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು , ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಈ ಸರ್ಕಾರದ ಸಾಧನೆ ಎಂದರು. ಬಳ್ಳಾರಿನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುಳ್ಳಿನ ಮಾಲೀಕ, ಡಿ.ಕೆ. ಶಿವಕುಮಾರ್ ಅವರನ್ನು ಸುಳ್ಳಿನ ಸಾಕ್ಷಿದಾರ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ., 2971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ರೈತರಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟಿದೆ ಎಂದು ಕಿಡಿಕಾರಿದರು. ಹಾಲು ಉತ್ಪಾದಕರಿಗೆ 700 ಕೋಟಿ ರು ಬಾಕಿ ಹಣ ನೀಡಿಲ್ಲ ಹಾಗೂ ಬೀಜ–ರಸ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಯಾವುದೇ ಕ್ರಮಕೈಗೊಳ್ಳದೇ ಮೂರು ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ರಾಜ್ಯದಲ್ಲಿ ಸಾರಿಗೆ ಇಲಾಖೆಯ ಸ್ಥಿತಿ ಹದಗೆಟ್ಟಿದ್ದು, ಬಸ್ ಪಂಚರ್ ಹಾಕಲು ಕೂಡ ಹಣ ಇಲ್ಲ ಎಂದು ಹೇಳಿದ ಅವರು, ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಅಂಗನವಾಡಿ ಕಾರ್ಯಕರ್ತರು ಸಂಬಳಕ್ಕಾಗಿ ಬೀದಿಗೆ ಇಳಿದಿದ್ದಾರೆ, ಸರ್ಕಾರಿ ನೌಕರರಿಗೂ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜಾತಿ ಹಾಗೂ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಸಿಎಂ ಕುರ್ಚಿಯ ನಾಲ್ಕು ಕಾಲುಗಳಲ್ಲಿ ಒಂದು ಕಾಲನ್ನು ಡಿಕೆ ಶಿವಕುಮಾರ್ ಈಗಾಗಲೇ ಕಸಿದುಕೊಂಡಿದ್ದಾರೆ, ಇನ್ನೂ ಮೂರು ಕಾಲು ಮಾತ್ರ ಉಳಿದಿವೆ. ಬರೀ ಸಿಎಂ ಕುರ್ಚಿಗಾಗಿ ಒಳ ಜಗಳ ತಾರಕಕ್ಕೇರಿದೆ. ಇದರ ನಡುವೆಯೇ ಮೂರು ವರ್ಷ ಕಳೆದಿದ್ದಾರೆ ಎಂದು ಹೇಳಿದರು.
ಜನರು ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಪಾಲಿಕೆ ಸದಸ್ಯ ಹನುಮಂತಪ್ಪ, ಮೋತ್ಕರ್ ಶ್ರೀನಿವಾಸ್, ಹೆಚ್. ಹನುಮಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.


