ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ಗೆ ಹಣಕಾಸು ನೆರವು ಹಾಗೂ ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಿರುವ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಬೆಂಗಳೂರಿನ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಯುವಕರನ್ನು ಉಗ್ರವಾದಕ್ಕೆ ಒಳಪಡಿಸುವ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಬೆಂಗಳೂರಿನಲ್ಲಿ ಹಲವು ಸ್ಥಳಗಳಲ್ಲಿ ಶೋಧ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಎಂಟು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದ್ದು, ಅಕ್ರಮ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್ಕೈಂಡ್ ಮತ್ತು ಕೆಲವು ವ್ಯಕ್ತಿಗಳನ್ನು ಒಳಗೊಂಡ ಐಸಿಸ್ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿದ್ದ ಎಫ್ಐಆರ್ ಹಾಗೂ ಚಾರ್ಜ್ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ನಡೆಸುತ್ತಿದೆ.
ಆರೋಪಿಗಳು ಬೆಂಗಳೂರಿನ ಮುಸ್ಲಿಂ ಯುವಕರನ್ನು ಐಸಿಸ್ನತ್ತ ಸೆಳೆಯಲು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಆಯೋಜಿಸುತ್ತಿದ್ದರು. ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಯುವಕರನ್ನು ಗುರುತಿಸಿ ಬ್ರೇನ್ವಾಶ್ ಮಾಡುತ್ತಿದ್ದರು. ನಾನಾ ಚಾನೆಲ್ಗಳ ಮೂಲಕ ಅಕ್ರಮ ಹಣ ಸಂಗ್ರಹಿಸಿ ಯುವಕರ ನೇಮಕಾತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಬ್ರೇನ್ವಾಶ್ ಆದ ಯುವಕರನ್ನು ಟರ್ಕಿ ಮೂಲಕ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಯುದ್ಧ ಮಾಡಲು ನೆರವು ನೀಡಲಾಗುತ್ತಿತ್ತು ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.


