Menu

ಶಿರಸಿಯ ಸಹಕಾರಿ ಬ್ಯಾಂಕ್‌ನಿಂದ ರೈತರ ಹೆಸರಲ್ಲಿ ಕೋಟ್ಯಂತರ ರೂ. ಸಾಲ ಪಡೆದು ವಂಚನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ದಾಸನಕೊಪ್ಪದ ಸಹಕಾರಿ ಬ್ಯಾಂಕ್‌ನಲ್ಲಿ ರೈತರ ಹೆಸರಲ್ಲಿ ಸಾಲ ಪಡೆದು ಕೋಟ್ಯಂತರ ರೂಪಾಯಿ ದುರುಪಯೋಗ ಹಗರಣ ಬೆಳಕಿಗೆ ಬಂದಿದೆ. ದಾಸನಕೊಪ್ಪದ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಗೋಲ್‌ಮಾಲ್ ನಡೆದಿದ್ದು, ವಂಚನೆಗೆ ಒಳಗಾದ ರೈತರು ಮತ್ತು ಷೇರುದಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಕೃಷಿ ಸಾಲದ ಹೆಸರಲ್ಲಿ ಅರವತ್ತಕ್ಕೂ ಹೆಚ್ಚು ರೈತರ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಹಣ ವಂಚಿಸಲಾಗಿದೆ. ಬ್ಯಾಂಕ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದು, ಕೃಷಿ ಆದಾಯ ಹಾಗೂ ಠೇವಣಿಗಳನ್ನು ಇಲ್ಲಿ ಇಡುತ್ತಿದ್ದರು. ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆದು, ಫಸಲು ಬಂದ ನಂತರ ಮರುಪಾವತಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುತ್ತಿದ್ದರು. ಇತ್ತೀಚೆಗೆ ಮತ್ತೆ ಸಾಲ ಪಡೆಯಲು ಹೋದ 60ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಹಳೆಯ ಸಾಲ ಬಾಕಿ ಇದೆ ಎಂದು ಹೇಳಿದ್ದಾರೆ. ಹಲವು ರೈತರಿಗೆ ಅವರು ಪಡೆದ ಸಾಲದ ದುಪ್ಪಟ್ಟು ಹಣ ಕಟ್ಟುವಂತೆ ನೋಟಿಸ್ ಜಾರಿಯಾಗಿದೆ.

ತನಿಖೆ ನಡೆಸಿದಾಗ ರೈತರು ಸಾಲಕ್ಕಾಗಿ ನೀಡಿದ್ದ ದಾಖಲೆಗಳನ್ನು ಬಳಸಿ ಅವರ ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬೇರೆ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮಾಡಲಾಗಿದೆ. ಬ್ಯಾಂಕ್‌ಗೆ ಸೇರಿದ 69 ಲಕ್ಷ ರೂಪಾಯಿ ಹಣವನ್ನು ಹಾನಗಲ್ ಮೂಲದ ವ್ಯಕ್ತಿಗೆ ಬಡ್ಡಿ ವ್ಯವಹಾರಕ್ಕಾಗಿ ವರ್ಗಾಯಿಸಲಾಗಿದೆ ಎಂದು ಷೇರುದಾರರು ಆರೋಪಿಸಿದ್ದಾರೆ.

ಬ್ಯಾಂಕ್‌ನಲ್ಲಿ ನಡೆದ ಹಗರಣದಿಂದ ಆತಂಕಗೊಂಡ ಗ್ರಾಹಕರು ತಾವು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಹಿಂಪಡೆಯಲು ಹೋದರೆ ಬ್ಯಾಂಕ್‌ನಲ್ಲಿ ಹಣವೇ ಇಲ್ಲ ಎನ್ನುವ ಉತ್ತರ ಸಿಗುತ್ತಿದೆ. ಬ್ಯಾಂಕ್ ಕಾರ್ಯದರ್ಶಿ ಸುನೀಲ್ ಬಸವರಾಜ್ ಗೌಡ ನಕಲಿ ದಾಖಲೆ ಸೃಷ್ಟಿಸಿ ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವುದು ಸಾಬೀತಾಗಿದೆ. ಆಡಳಿತ ಮಂಡಳಿಯ 12 ಸದಸ್ಯರ ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಸಾಲ ಮಂಜೂರಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಸಂತ್ರಸ್ತರು.

ಸಹಕಾರಿ ಇಲಾಖೆಯ ಉಪ ನಿಬಂಧಕರಾದ ತೇಜಸ್ವಿನಿ, ಕಾರ್ಯದರ್ಶಿ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಿಲ್ಲಾ ಸಹಕಾರಿ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸಿ ವರದಿ ನೀಡಿದ ಬಳಿಕ ಕಠಿಣ ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ರೈತರು ಬ್ಯಾಂಕ್ ಮುಂದೆ ಧರಣಿ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *