ಕುಂಭಮೇಳದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 30 ಮಂದಿ ಮೃತಪಟ್ಟ ಘಟನೆ ಸೋಮವಾರ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದರಿಂದ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಬಜೆಟ್ ಅಧಿವೇಶನ ಸೋಮವಾರ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ಪ್ರತಿಪಕ್ಷಗಳು ಪ್ರಸ್ತಾಪಿಸಿದವು.
ಕುಂಭಮೇಳದಲ್ಲಿ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ ಎಂದು ತಿಳಿದಿದ್ದರೂ ಸೂಕ್ತ ಮುನ್ನೆಚ್ಚರಿಕೆ ವಹಿಸದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತನಿಖೆಗೆ ಆದೇಶಿಸಬೇಕು ಹಾಗೂ ಅವರನ್ನು ಸಿಎಂ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು.
ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ದುರಂತದ ಬಗ್ಗೆ ಈಗಾಗಲೇ ತನಿಖೆ ಆದೇಶಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಲೋಕಸಭೆಯ ಸಮಯ ವ್ಯರ್ಥ ಮಾಡಲು ಅನಗತ್ಯ ವಿಷಯ ಪ್ರಸ್ತಾಪಿಸುವುದು ಬೇಡ ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಸಂಸದೀಯ ಸಚಿವ ಕಿರಣ್ ರಿಜಿಜು, ನಿಮ್ಮನ್ನು ಇಲ್ಲಿಗೆ ಜನರು ಆಯ್ಕೆ ಮಾಡಿ ಕಳುಹಿಸಿರುವುದು ಪ್ರಶ್ನೆ ಕೇಳಲು. ಬೆಂಚು ಕುಟ್ಟಿ ಹಾಳು ಮಾಡಲು ಅಲ್ಲ. ಹಾಗೆ ಮಾಡಿದರೂ ಬೆಂಚುಗಳು ಮುರಿಯುವುದಿಲ್ಲ ಎಂದು ಹೇಳಿದರು.