ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎಂಬ ನಾರಾಯಣ ಗುರುಗಳ ಸಂದೇಶದ ಆಶಯದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿ ಅಥವಾ ಸಮುದಾಯವನ್ನು ಆಧರಿಸಿ ನೀಡುತ್ತಿಲ್ಲ, ಜನರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನೀಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರುಗಳ ತತ್ವಗಳು ಮಾನವೀಯತೆ, ಸಮಾನತೆ ಹಾಗೂ ಸಹಬಾಳ್ವೆಯ ಮೂಲಮಂತ್ರವಾಗಿದೆ. ನಾರಾಯಣ ಗುರುಗಳು ಕೇವಲ ಧಾರ್ಮಿಕ ಗುರುಗಳಲ್ಲ, ಅವರು ಜ್ಞಾನ, ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆಯ ಮಹಾನ್ ತತ್ವಜ್ಞಾನಿ. ಗುರು ಎನ್ನುವ ಪದವೇ ಶ್ರೇಷ್ಠವಾದುದು. ಧರ್ಮಪೀಠಗಳು, ದೇವರುಗಳು ಅನೇಕ ಇರಬಹುದು. ಆದರೆ ಗುರುವಿಗಿಂತ ಶ್ರೇಷ್ಠವಾದುದು ಬೇರೊಂದಿಲ್ಲ ಎಂದರು.
ನಾರಾಯಣ ಗುರುಗಳು ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಹಾಗೂ ಶಿಕ್ಷಣದತ್ತ ಸಾಗುವಂತೆ ಪ್ರೇರೇಪಿಸಿದ ಮಹಾನ್ ತತ್ವಜ್ಞಾನಿ ಎಂದು ಬಣ್ಣಿಸಿದರು. ಗುಡಿ ಕಟ್ಟುವುದಕ್ಕಿಂತ ಶಾಲೆ ಕಟ್ಟಿ, ಶಿಕ್ಷಣದ ಮೂಲಕ ಸಮಾಜವನ್ನು ಬೆಳಕಿನತ್ತ ಕೊಂಡೊಯ್ಯಬೇಕು ಎಂಬ ನಾರಾಯಣ ಗುರುಗಳ ಸಂದೇಶವೇ ಇಂದಿಗೂ ಸಮಾಜದ ಮುನ್ನಡೆಗೆ ದಾರಿ.ಶಿಕ್ಷಣ, ಸಮಾನತೆ ಗುರುಗಳ ಆಶಯವಾಗಿತ್ತು. ನಾರಾಯಣ ಗುರುಗಳು ಕೇವಲ ಧಾರ್ಮಿಕ ಸುಧಾರಕರಲ್ಲ; ಅವರು ಜ್ಞಾನಯೋಗಿ, ಕರ್ಮಯೋಗಿ ಹಾಗೂ ಮಹಾನ್ ತತ್ವಜ್ಞಾನಿಯಾಗಿದ್ದರು. ‘ಶಿಕ್ಷಣ ಪಡೆಯಲು ಶ್ರಮಿಸಿ’ ಎಂಬ ಅವರ ಸಂದೇಶ ಸಮಾಜ ಪರಿವರ್ತನೆಯ ಅಸ್ತ್ರವಾಗಿತ್ತು. ರಾತ್ರಿ ಶಾಲೆಗಳನ್ನು ನಡೆಸಿ, ಇಂಗ್ಲಿಷ್ ಕಲಿಕೆಗೆ ಒತ್ತು ನೀಡುವಂತೆ ಅವರು ಕರೆ ನೀಡಿದ್ದರು ಎಂದು ಸ್ಮರಿಸಿದರು.
ಜಾತಿ–ಭೇದ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಅವರು ನಡೆಸಿದ ಹೋರಾಟ ಶಾಶ್ವತವಾದುದು. ತಾವು ನಂಬಿದ ಅಜ್ಜಯ್ಯ ಅವರು, ಮಾನವ ಧರ್ಮಕ್ಕೆ ಜಯವಾಗಲಿ,ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳುತ್ತಿದ್ದರು. ನಾರಾಯಣ ಗುರುಗಳ ಚಿಂತನೆಯೂ ಇದೇ ಮಾನವೀಯ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಇಂತಹ ಬೆಳಕು ನೀಡಿದ ತತ್ವಜ್ಞಾನಿಗಳು ದೇಶಕ್ಕೆ ಇಂದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಹೇಳಿದರು.
ತಾನು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದು, ಶೋಷಿತ ವರ್ಗದ ಕೈಹಿಡಿದು ಮುನ್ನಡೆಸುವ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದೇನೆ. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಬಂಗಾರಪ್ಪ ರಾಜಕೀಯ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಗ್ರಾಮೀಣ ಭಾಗದ ಸಣ್ಣ ದೇವಾಲಯಗಳ ಅಭಿವೃದ್ಧಿಗಾಗಿ ಆರಾಧನಾ ಯೋಜನೆ ಜಾರಿಗೆ ತಂದರು ಎಂದು ಸ್ಮರಿಸಿದರು.
ಮಧು ಬಂಗಾರಪ್ಪ ಅವರು ಜನತಾದಳದಲ್ಲಿದ್ದ ಸಂದರ್ಭದಲ್ಲಿ ಅವರೊಂದಿಗೆ ನಡೆದ ಮಾತುಕತೆಯನ್ನು ಸ್ಮರಿಸಿದ ಮುಖ್ಯಮಂತ್ರಿ,“ನಾನು ನಿನ್ನ ರಕ್ಷಣೆಗೆ ಇದ್ದೇನೆ ಎಂದು ಹೇಳಿದ್ದೆ. ನದಿಯಲ್ಲಿ ಈಜಬೇಡ, ಸಮುದ್ರದಲ್ಲಿ ಈಜುವಂತೆ ಕರೆದೆ. ಕಾಂಗ್ರೆಸ್ಗೆ ಬಂದ ಆರು ತಿಂಗಳಲ್ಲೇ ಚುನಾವಣೆಗೆ ಟಿಕೆಟ್ ನೀಡಲಾಯಿತು ಎಂದರು.
ಅಬಕಾರಿ ಇಲಾಖೆ ನೀಡಬೇಕೇ ಎಂದು ಕೇಳಿದಾಗ ಮಧು ಬಂಗಾರಪ್ಪ ಅವರು ಗಾಬರಿಯಾಗಿ ಬೇಡ ಎಂದರು. ಶಿಕ್ಷಣ ಇಲಾಖೆಯನ್ನೇ ಮುಂದುವರಿಸುವಂತೆ ಮನವಿ ಮಾಡಿದರು. ಇದೀಗ ಅವರು ತಮ್ಮ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಬಂಗಾರಪ್ಪ ಅವರ ಮನೆ ಮುಂದಿದ್ದ ಮಾವಿನ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದ ಸಂದರ್ಭದಲ್ಲಿ, “ವು ಕೂಡ ಬಂಗಾರಪ್ಪ ಅವರಂತೆ ಆಗಬೇಕು ಎಂದು ಯಾರೋ ಹೇಳಿದ್ದನ್ನು ಮುಖ್ಯಮಂತ್ರಿ ನೆನಪಿಸಿಕೊಂಡರು. ಬಂಗಾರಪ್ಪ ಅವರು ಕ್ಷೇತ್ರಕ್ಕೆ ಹೆಚ್ಚು ಹೋಗದಿದ್ದರೂ ಚುನಾವಣೆಯಲ್ಲಿ ಗೆಲ್ಲುವಂತಹ ಜನಬೆಂಬಲ ಹೊಂದಿದ್ದರು. ಅದೇ ರೀತಿಯಲ್ಲಿ ತಾನೂ ಚುನಾವಣೆಯ ಕೊನೆಯ ದಿನ ಮಾತ್ರ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸಿ, ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ ಎಂದು ಹೇಳಿದರು.
ಬಂಗಾರಪ್ಪ ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಆಯ್ಕೆ ಮಾಡುವ ವೇಳೆ, ನಾನೂ ಸಹ ಬಂಧಿಖಾನೆ ಸಚಿವನಾಗಿದ್ದೆ , ಡಿಕೆ. ಶಿವಕುಮಾರ್ ಕೂಡ ಮುಂದಕ್ಕೆ ಮುಖ್ಯಮಂತ್ರಿ ಆಗಲಿ, ಅವರಿಗೆ ಇದೇ ಖಾತೆ ಕೊಡಿ ಎಂದು ಹೇಳಿದ್ದನ್ನು ಸ್ಮರಿಸಿದ ಅವರು. ಇಂದು ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ತಮ್ಮ ಸಂಪುಟದಲ್ಲಿ ಸಚಿವರಾಗಿರುವುದು ಸಂತಸದ ಸಂಗತಿ ಎಂದರು.
ರಾಜೀವ್ ಗಾಂಧಿ ಕರ್ನಾಟಕಕ್ಕೆ ಬಂದ ಸಂದರ್ಭ ಚನ್ನಪಟ್ಟಣದಲ್ಲಿ ಕೋಮು ಗಲಭೆ ಉಂಟಾಗಿತ್ತು. ರಾಜೀವ್ ಗಾಂಧಿ ಅವರು ನನ್ನ ಕರೆದು ರಾಜ್ಯ ನಾಯಕತ್ವದ ಬಗ್ಗೆ ಮಾತನಾಡಿದರು. ನಾನು ಅಂದು ಬಂಗಾರಪ್ಪ ಅವರಿಗೆ ನೀವು ಮುಖ್ಯಮಂತ್ರಿ ಆಗುವಿರಿ ಎಂದು ಹೇಳಿದೆ. ಆಗ ಅವರು ನೀನು ಹೇಳಿದಂತೆ ಆದರೆ ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದರು. ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದರು ಎಂದು ಅಂದಿನ ರಾಜಕೀಯ ಘಟನೆಗಳನ್ನು ಮೆಲುಕು ಹಾಕಿದರು.
ಈಡಿಗ–ಬಿಲ್ಲವ ಸಮುದಾಯದಿಂದ ಹಿಂದೆ ಅನೇಕ ಜನಪ್ರತಿನಿಧಿಗಳಿದ್ದರು. ಜಾಲಪ್ಪ, ಜನಾರ್ದನ ಪೂಜಾರಿ, ವಿನಯ್ ಕುಮಾರ್ ಸೊರಕೆ ಸೇರಿದಂತೆ ಹಲವರು ಸಮಾಜದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮುದಾಯದ ಜನಪ್ರತಿನಿಧಿಗಳ ಸಂಖ್ಯೆ ಕುಸಿಯುತ್ತಿರುವುದು ಗಮನಾರ್ಹ ಎಂದು ಮುಖ್ಯಮಂತ್ರಿ ಹೇಳಿದರು. ಸಮಾಜದ ಅಭಿವೃದ್ಧಿಗೆ ಸಮುದಾಯದ ಮುಖಂಡರು ಸಂಘಟಿತರಾಗಿ ಕೆಲಸ ಮಾಡಬೇಕು. ಶಿಕ್ಷಣ, ಉದ್ಯೋಗ, ಆರ್ಥಿಕ ಪ್ರಗತಿ ಹಾಗೂ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ಕರೆ ನೀಡಿದರು.
ಬಂಗಾರಪ್ಪ ಅವರ ಕಾಲದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ಬಂದಿತ್ತು. ಆಗ ರಾಜ್ಯದ ಬಜೆಟ್ ಸುಮಾರು ₹300–400 ಕೋಟಿಯಷ್ಟಿತ್ತು. ಇಂದು ಕೃಷಿ ಸೇರಿದಂತೆ ಉಚಿತ ವಿದ್ಯುತ್ ಯೋಜನೆಗಳ ವೆಚ್ಚ ₹20 ಸಾವಿರ ಕೋಟಿಯ ಮಟ್ಟ ತಲುಪಿದೆ ಎಂದು ಹೇಳಿದರು. ನಾರಾಯಣ ಗುರುಗಳ ಸಮಾನತೆ ಮತ್ತು ಮಾನವೀಯತೆಯ ಆಶಯವನ್ನು ಸರ್ಕಾರದ ಜನಪರ ಕಾರ್ಯಕ್ರಮಗಳ ಮೂಲಕ ಸಾಕಾರಗೊಳಿಸುವುದು ತಮ್ಮ ಉದ್ದೇಶ ಎಂದರು.
ನಾನು ನಿಮ್ಮವನು, ನೀವು ನಮ್ಮವರು. ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸುತ್ತೇನೆ. ನಮಗೂ–ನಿಮಗೂ ಸೂಕ್ತವಾದ ಬಾಂಧವ್ಯ ಬೆಸೆದುಕೊಳ್ಳಬೇಕು. ಸಮುದಾಯದ ಪ್ರಗತಿಗೆ ಸರ್ಕಾರ ಸದಾ ಸಹಕಾರ ನೀಡಲಿದೆ. ನಾರಾಯಣ ಗುರುಗಳ ಶಿಕ್ಷಣ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ತತ್ವಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಹೇಳಿದರು.


