Menu

ಒಂಬತ್ತು ಮದುವೆಯಾಗಿ ಹಣ ಒಡವೆಯೊಂದಿಗೆ ವಧು ಪರಾರಿ; ಜಾಲ ಪತ್ತೆ ಹಚ್ಚಿದ ಪೊಲೀಸ್‌

ಆಸ್ತಿ, ಹಣಕಾಸು ಚೆನ್ನಾಗಿರುವ ಗಂಡಸರನ್ನು ಮದುವೆಯಾಗಿ ಬಳಿಕ ಹಣ ಮತ್ತು ಆಭರಣ ದೋಚಿಕೊಂಡು ಪರಾರಿಯಾಗುತ್ತಿದ್ದ ವಧುವಿನ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಏಜೆಂಟ್‌ಗಳ ನೆರವಿನೊಂದಿಗೆ ಹಲವು ಮಂದಿಯನ್ನು ಮದುವೆಯಾಗಿ ಕೆಲವೇ ದಿನಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದರು.

ಯೋಗೇಶ್ ಶಿಂಧೆ ಎಂಬವರು ಮಧ್ಯವರ್ತಿ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಆಯೋಜಿಸಲು ವರನ ಕಡೆಯಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾಗಿದ್ದಾರೆ.

ಈ ಮಹಿಳೆ ತನಗಿಂತ ಮೊದಲು ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ವಿಚಾರ ಯೋಗೇಶ್‌ ಶಿಂಧೆಗೆ ತಡವಾಗಿ ತಿಳಿಯಿತು. ಮದುವೆಗೆ ಮೊದಲು ಆಕೆಯ ಹಿಂದಿನ ವಿವಾಹಗಳ ಬಗ್ಗೆ ಯೋಗೇಶ್‌ಗೆ ಯಾವುದೇ ಮಾಹಿತಿ ಇರಲಿಲ್ಲ.

ಅಘಾತಕ್ಕೊಳಗಾದ ಯೋಗೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಾಗಿದ್ದು, ತಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಮದುವೆ ವಂಚನೆಯ ಜಾಲವು ಬೀಡ್ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತ ಪದವೀಧರ ಪುರುಷರನ್ನು ಗುರಿಯಾಗಿಸಿಕೊಂಡಿದೆ. ವಧು ಸಿಗದೆ ಹೆಣಗಾಡುತ್ತಿರುವ ಕುಟುಂಬಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಗ್ಯಾಂಗ್ ಮದುವೆ ಮಾಡಿಸುವ ನೆಪದಲ್ಲಿ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿತ್ತು. ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಇತರ ಸದಸ್ಯರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *