ಕೆಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಜಾಮೀನಿನಲ್ಲಿ ಹೊರ ಬಂದಿರುವ ಅವರ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆಪ್ ನಾಯಕಿ ಸತ್ಯವಾಣಿ ದೂರು ದಾಖಲಿಸಿದ್ದಾರೆ.
ಬಸವರಾಜ್ ಬೆಂಬಲಿಗರು ತನ್ನ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿ ಬೆದರಿಕೆ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ವಿಜ್ಞಾನ ನಗರ ವಾರ್ಡ್ ಅಧ್ಯಕ್ಷೆ ಸತ್ಯವಾಣಿ ದೂರಿದ್ದಾರೆ. ಕಳೆದ ತಿಂಗಳು ಶಾಸಕರು ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ 50 ಬೃಹತ್ ಫ್ಲೆಕ್ಸ್ ಬ್ಯಾನರ್‌ಗಳನ್ನು ವಾರ್ಡ್‌ನಾದ್ಯಂತ ಹಾಕಿಸಿದ್ದರು. ಆರಂಭದಲ್ಲಿ ಈ ಬಗ್ಗೆ ದೂರು ನೀಡಲು ಹೋದಾಗ ಎಚ್‌ಎಎಲ್ ಪೊಲೀಸರು ಶಾಸಕರ ಒತ್ತಡಕ್ಕೆ ಮಣಿದು ದೂರು ಸ್ವೀಕರಿಸಲು ನಿರಾಕರಿಸಿದ್ದರು, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ಮುಂಬರುವ ಜಿಬಿಎ ಚುನಾವಣೆಗಳಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಯುತ್ತಿದೆ ಮತ್ತು ಬೆದರಿಕೆಗಳು ಬರುತ್ತಿವೆ. ಕಳೆದ ಹಲವು ವರ್ಷಗಳಿಂದ ಕೆರೆ ಒತ್ತುವರಿ ವಿರುದ್ಧ ಹೋರಾಟ ನಡೆಸುತ್ತಿರುವ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ನೇರವಾಗಿ ಶಾಸಕ ಬೈರತಿ ಬಸವರಾಜ್ ಹೊಣೆ ಎಂದು ಎಚ್ಚರಿಸಿದ್ದಾರೆ. ಪೊಲೀಸರು ಶಾಸಕರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಘಟನೆಯು ಕೆ.ಆರ್. ಪುರಂನಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿತ್ತಗನೂರಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2025ರ ಜುಲೈ 15ರಂದು ಬೆಂಗಳೂರಿನ ಭಾರತಿನಗರದಲ್ಲಿ ನಡೆದ ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯಾಗಿದ್ದಾರೆ.
ನಿರೀಕ್ಷಣಾ ಜಾಮೀನು ವಜಾಗೊಂಡ ಬಳಿಕ 2026ರ ಫೆಬ್ರವರಿಯಲ್ಲಿ ಸಿಐಡಿ ಪೊಲೀಸರು ಇವರನ್ನು ಬಂಧಿಸಿದ್ದರು, 28 ದಿನ ನ್ಯಾಯಾಂಗ ಬಂಧನದಲ್ಲಿದ್ದರು. 2026ರ ಮಾರ್ಚ್ 12ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು.


