Wednesday, September 16, 2026
Menu

ಐಎಎಫ್‌ನಲ್ಲಿ ಉದ್ಯೋಗ ಆಮಿಷ: ಯುವಕನ ಚಿನ್ನ ದೋಚಿದ ನಕಲಿ ಅಧಿಕಾರಿ

ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ವಂಚಕನೊಬ್ಬ ಉದ್ಯೋಗ ಕೊಡಿಸುವುದಾಗಿ ಯುವಕನನ್ನು ನಂಬಿಸಿ ಚಿನ್ನದ ಚೈನ್‌ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟೇಗಾರ್ ಪಾಳ್ಯದ ನಿವಾ, 25 ವರ್ಷದ ಸುಜನ್ ಆರ್.ಕೆ. ವಂಚನೆಗೊಳಗಾದ ಯುವಕ. ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ರಾವ್ ಪವಾರ್ ಎಂಬಾತ ವಂಚಕ. ವಾಯುಪಡೆಯಲ್ಲಿ ಕೆಲಸ ಖಾಲಿ ಇದೆ ಎಂದು ಸಂಬಂಧಿಕರೊಬ್ಬರು ನೀಡಿದ ಮಾಹಿತಿಯಂತೆ ಸುಜನ್, ಆರೋಪಿ ರಾವ್ ಪವಾರ್‌ನನ್ನು ಸಂಪರ್ಕಿಸಿದ್ದರು.

ಯುವಕನನ್ನು ಶೆಟ್ಟಿಹಳ್ಳಿ ಕ್ರಾಸ್ ಹಾಗೂ ಗಂಗಮ್ಮನಗುಡಿ ಬಳಿಯ ಕೆನರಾ ಬ್ಯಾಂಕ್ ಹತ್ತಿರ ಕರೆಸಿಕೊಂಡಿದ್ದ ವಂಚಕ, ಉದ್ಯೋಗದ ಅರ್ಜಿಗಾಗಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದ. ವಾಯುಪಡೆ ಕ್ಯಾಂಪಸ್ ಒಳಗೆ ಹೋಗುವಾಗ ಶರೀರದ ಮೇಲೆ ಯಾವುದೇ ಚಿನ್ನಾಭರಣ ಅಥವಾ ಲೋಹದ ವಸ್ತುವಿರಬಾರದು, ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಬೇಕು ಎಂದು ನಂಬಿಸಿದ್ದ. ಸಂದರ್ಶನದ ನಂತರ ಚೈನ್ ವಾಪಸ್ ಪಡೆಯಬಹುದು ಎಂದು ನಂಬಿಸಿ ಚಿನ್ನದ ಚೈನ್‌ ಬಿಚ್ಚಿಸಿಕೊಂಡಿದ್ದ.

ಚೈನ್ ಪಡೆದ ನಂತರ ಯುವಕನಿಗೆ ಆಧಾರ್ ಕಾರ್ಡ್‌ನ ಜೆರಾಕ್ಸ್ ಕಾಪಿ ತೆಗೆದುಕೊಂಡು ಬರುವಂತೆ ಹೇಳಿ ವಂಚಕ ಅಲ್ಲಿಂದ ಪರಾರಿಯಾಗಿದ್ದ, ಜೆರಾಕ್ಸ್ ಪ್ರತಿಯೊಂದಿಗೆ ಹಿಂತಿರುಗಿದ ಯುವಕ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ ಆಫ್ ಆಗಿತ್ತು. ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಯುವಕ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *