Wednesday, September 16, 2026
Menu

ರಾಜ್ಯವನ್ನು ಕಾಡುತ್ತಿದೆ ವಿದ್ಯುತ್‌ ಮತ್ತು ನೀರು ಬರ

water

ರಾಜ್ಯದಲ್ಲಿ ಮಳೆ ಸಕಾಲಕ್ಕೆ ಬಾರದ ಕಾರಣ ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆ ಬರಲಿದೆ ಎಂದು ಮುಖ್ಯಮಂತ್ರಿಗಳೇ ಎಚ್ಚರಿಕೆ ನೀಡಿದ್ದಾರೆ. ಹಿಂಗಾರು ಮಳೆ ಉತ್ತಮವಾಗಿ ಬರಬಹುದು ಎಂಬ ನಿರೀಕ್ಷೆ ಇದೆ. ಅದು ಕೈಕೊಟ್ಟರೆ ಮುಂದಿನ ವರ್ಷ ಜೂನ್ ವರೆಗೂ ಬರವನ್ನು ನಿಭಾಯಿಸುವುದಕ್ಕೆ ಈಗಲೇ ಯೋಜಿಸುವುದು ಅಗತ್ಯ.

ಈಗ ಪ್ರತಿದಿನ ೩೩೨ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಒಂದು ವಾರದ ಹಿಂದೆ ಯರಮರಸ್ ಮತ್ತು ಬಳ್ಳಾರಿ ಸಂಪೂರ್ಣವಾಗಿ ಸ್ಥಗಿತಗೊಂಡು ೩ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಗಿತಗೊಂಡಿತು. ಇದರಿಂದ ಕೊಡಗು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಒಂದು ದಿನ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇದಕ್ಕೆ ಕೆಪಿಸಿ ಕಾರಣವೇ ಹೊರತು ಚಾಮುಂಡೇಶ್ವರಿ ಕಂಪನಿಯಲ್ಲ. ಆದರೆ ಜನ ವಿತರಣ ಕಂಪನಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ ವರ್ಷ ಮಳೆ ಉತ್ತಮವಾಗಿ ಬಂದಿದ್ದರಿಂದ ಜಲ ವಿದ್ಯುತ್ ಆಸರೆ ಕೊಟ್ಟಿತ್ತು. ಈಗ ಮಳೆ ಕೈಕೊಟ್ಟಿದೆ. ಸೋಲಾರ್ ಬೆಳಗ್ಗೆ ಬೇಕಾದ ವಿದ್ಯುತ್ ನೀಡುತ್ತದೆ. ಸಂಜೆ ವಿದ್ಯುತ್ ಪೂರೈಕೆ ಜಾಲವನ್ನು ನಿಭಾಯಿಸುವುದು ಕಷ್ಟವಾಗಿದೆ.

ಹಿಂದೆ ಥರ್ಮಲ್ ಕೇಂದ್ರಗಳೇ ರಾಜ್ಯದ ಶೇ.೫೦ ವಿದ್ಯುತ್ ಬೇಡಿಕೆಯನ್ನು ಪೂರೈಕೆ ಮಾಡುತ್ತಿತ್ತು. ಪರಿಸರ ಮಾಲಿನ್ಯ ಹೆಚ್ಚು ಎಂದು ಇವುಗಳನ್ನು ಶೇ.೫೫ ರಷ್ಟು ಮಾತ್ರ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಸೋಲಾರ್ ವಿದ್ಯುತ್ ಉತ್ಪಾದನೆ ಅಧಿಕಗೊಳ್ಳುವವರೆಗೆ ಥರ್ಮಲ್ ಮೇಲೆ ಅವಲಂಬಿಸುವುದು ಅವಿವಾರ್ಯ. ಜಲ ವಿದ್ಯುತ್ ಮಳೆಯನ್ನು ಆಧರಿಸಿದೆ. ಸೋಲಾರ್ ಮತ್ತು ಪವನ ವಿದ್ಯುತ್ ಈಗ ಶೇ ೫೨ ರಷ್ಟು ಬೇಡಿಕೆ ಪೂರೈಕೆ ಮಾಡುತ್ತಿದೆ. ಆದರೆ ಇದು ಸಂಜೆ ೬ ಗಂಟೆ ನಂತರ ಲಭ್ಯವಿರುವುದಿಲ್ಲ. ಇದನ್ನು ಥರ್ಮಲ್ ಕೇಂದ್ರಗಳ ಮೂಲಕ ಸರಿತೂಗಿಸಬೇಕಿದೆ. ಹೀಗಿರುವಾಗ ಖಾಸಗಿಯನ್ನು ಹೊರತುಪಡಿಸಿ ಎಲ್ಲ ಥರ್ಮಲ್ ಘಟಕಗಳನ್ನು ಕೇಂದ್ರವೇ ವಹಿಸಿಕೊಳ್ಳುವುದು ಸೂಕ್ತ. ಏಕೆಂದರೆ ರಾಜ್ಯದ ಬೊಕ್ಕಸದಲ್ಲಿ ಹೆಚ್ಚು ಬಂಡವಾಳ ಹೂಡುವುದಕ್ಕೆ ಹಣ ಇರುವುದಿಲ್ಲ. ಈಗ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಕೇಂದ್ರಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಇದ್ದರೂ ಒಪ್ಪಂದದಂತೆ ಹಣ ಕೊಡಲೇಬೇಕು. ಅದೇರೀತಿ ಸೋಲಾರ್ ಮತ್ತು ಪವನ ವಿದ್ಯುತ್ ಎಷ್ಟು ಲಭ್ಯವೋ ಅಷ್ಟನ್ನೂ ಬಳಸಿಕೊಳ್ಳಬೇಕು.

ಈ ಅಡಕತ್ತರಿಯಲ್ಲಿ ರಾಜ್ಯ ಸರ್ಕಾರಗಳು ಸಿಲುಕಿವೆ. ಈಗ ರಾಯಚೂರು ಸೇರಿದಂತೆ ಎಲ್ಲ ಘಟಕಗಳು ಹಳೆಯದಾಗಿವೆ. ಇವುಗಳನ್ನು ದುರಸ್ತಿಗೊಳಿಸಲು ಹೆಚ್ಚು ಬಂಡವಾಳ ಬೇಕು. ಆದರೂ ಕಲ್ಲಿದ್ದಲು ಬಳಕೆಗೆ ಕೇಂದ್ರದ ನಿರ್ಬಂಧ ಬಹಳ ಇರುವುದರಿಂದ ರಾಜ್ಯ ಸರ್ಕಾರ ಸೋಲಾರ್ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡುವುದು ಅನಿವಾರ್ಯ. ಅಲ್ಲದೆ ಕೇಂದ್ರ ಸಹಾಯಧನ ನೀಡುತ್ತಿದೆ. ಅದರಿಂದ ಜನ ಸಹಜವಾಗಿ ಸೋಲಾರ್ ಉತ್ಪಾದನೆಗೆ ಗಮನ ಕೊಡುತ್ತಾರೆ. ಖಾಸಗಿ ಬಂಡವಾಳ ಕೂಡ ಸೋಲಾರ್‌ಗೆ ಹೆಚ್ಚು ಲಭಿಸುತ್ತಿದೆ. ಇದು ಸಂಜೆ ಲಭಿಸದೇ ಇರುವುದರಿಂದ ಬ್ಯಾಟರಿ ದಾಸ್ತಾನು ಮತ್ತು ಪಂಪ್‌ಡ್ ಸ್ಟೋರೇಜ್ ವ್ಯವಸ್ಥೆಗೆ ಹಣ ತೊಡಗಿಸಬೇಕಾದ ಪರಿಸ್ಥಿತಿ ಬಂದಿದೆ. ಕಲ್ಲಿದ್ದಲು ಆಧರಿತ ವಿದ್ಯುತ್ ಬಳಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಒಮ್ಮಜತದ ತೀರ್ಮಾನಕ್ಕೆ ಬರುವುದು ಅಗತ್ಯ. ಕೆಲವು ರಾಜ್ಯಗಳಲ್ಲಿ ಮಾತ್ರ ಕಲ್ಲಿದ್ದಲು ಗಣಿ ಇದೆ. ಇದರಿಂದ ಪರಿಸರ ಮಾಲಿನ್ಯ ಅಧಿಕ ಎಂದು ಕೈಬಿಡಲು ಜಾಗತಿಕ ಮಟ್ಟದಲ್ಲಿ ತೀರ್ಮಾನ ಕೈಗೊಂಡರೂ ಅಮೆರಿಕ ಅದನ್ನು ಕೈಬಿಡಲು ಸಿದ್ಧವಿಲ್ಲ. ಅದರಿಂದ ನಾವೂ ವ್ಯಾವಹಾರಿಕವಾಗಿ ತೀರ್ಮಾನ ಕೈಗೊಳ್ಳುವುದು ಅಗತ್ಯ.

Related Posts

Leave a Reply

Your email address will not be published. Required fields are marked *