Wednesday, September 09, 2026
Menu

ಚಿತ್ರದುರ್ಗ ಆಸ್ಪತ್ರೆಯಲ್ಲಿ ಅಹವಾಲು ಸ್ವೀಕರಿಸದೆ ನಡೆದ ಡಿಸಿ: ತಡೆದ ರೋಗಿಗಳ ಸಂಬಂಧಿಕರು

ಚಿತ್ರದುರ್ಗ ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ರೋಗಿಗಳ ಸಂಬಂಧಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಸ್ಪತ್ರೆ ಪರಿಶೀಲನೆಗೆ ಆಗಮಿಸಿದ್ದ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿ ಎಸ್. ರಮ್ಯ ರೋಗಿಗಳ ಅಹವಾಲುಗಳನ್ನು ಕೇಳದೆ ಕಾರಿನ ಕಡೆಗೆ ಹೊರಟ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರು ಜಿಲ್ಲಾಧಿಕಾರಿ ಕಾರಿಗೆ ಅಡ್ಡ ಮಲಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲಾಸ್ಪತೆಗೆ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿ ಎಸ್.ರಮ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಕೆಲ ರೋಗಿಗಳ ಸಂಬಂಧಿಗಳು ಮುಂದಾದರು. ಈ ವೇಳೆ ಜಿಲ್ಲಾಧಿಕಾರಿಗಳು ಕಾರಿನಿಂದ ಕೆಳಗಿಳಿದು ಅಹವಾಲು ಆಲಿಸಲಿಲ್ಲ, ಬಂದ ದಾರಿಗೆ ಸುಂಕವಿಲ್ಲದಂತೆ ಕಾರುತ್ತಿ ಹೊರ ನಡೆದರು. ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿವಿಧ ಸೇವೆಗಳಲ್ಲಿ ಅಡಚಣೆ ಎದುರಾಗಿದೆ ಎಂಬ ಸಾಕಷ್ಟು ಸಮಸ್ಯೆಗಳನ್ನ ಸಾರ್ವಜನಿಕರು ಅಹವಾಲುಗಳನ್ನು ಹೇಳಿಕೊಳ್ಳಲು ಬಂದಂತ ರೋಗಿಗಳ ಮಾತಿಗೆ ಮುಖ ಕೊಡದೆ ಮುಖಕ್ಕೆ ಮಾಸ್ಕನ್ನು ಧರಿಸಿ ಜಿಲ್ಲಾಧಿಕಾರಿ ಕಾರುತ್ತಿ ಹೊರ ನಡೆದಿರುವ ಘಟನೆ ನಡೆದಿದೆ.

ಅಹವಾಲಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೋಗಿಯ ಸಂಬಂಧಿ ಚಿಕ್ಕಪ್ಪನಹಳ್ಳಿ ಪ್ರಕಾಶ್ ಎಂಬವರು ಜಿಲ್ಲಾಧಿಕಾರಿಗಳ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಜಿಲ್ಲೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಪ್ರಮುಖ ಆರೋಗ್ಯ ಸೇವೆಯ ಕೇಂದ್ರವಾಗಿದೆ. ಇಂತಹ ಪ್ರಮುಖ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಸ್ಪತ್ರೆಗೆ ಬರುವ ರೋಗಿಗಳು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾದರೆ, ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಇಲ್ಲದೆ ನೆರೆ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ, ಅದು ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ಉಂಟು ಮಾಡಿದಂತಾಗಿದೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿಗಳು ರೋಗಿಗಳ ಅಹವಾಲುಗಳನ್ನು ಕೇಳಬೇಕು ಅದನ್ನು ಹೊರತುಪಡಿಸಿ ಅಧಿಕಾರಿಗಳ ಜೊತೆ ಸ್ವಚ್ಛವಿರುವ ಆಸ್ಪತ್ರೆಯ ಜಾಗಗಳನ್ನ ವೀಕ್ಷಿಸುತ್ತಿರುವಾಗ ರೋಗಿಗಳ ಸಂಬಂಧಿಕರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪ್ರಶ್ನೆಗೆ ಉತ್ತರಿಸದೆ ಹೊರ ನಡೆದವರು ಅತ್ಯಂತ ಖಂಡನೀಯ ಎಂದು ಚಿಕ್ಕಪ್ಪನಹಳ್ಳಿ ಪ್ರಕಾಶ್ ಅವರು ಖಂಡಿಸಿದ್ದಾರೆ.

ರೋಗಿಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸಬೇಕಾದ ಅಧಿಕಾರಿಗಳು, ಅಹವಾಲು ಸ್ವೀಕರಿಸದೆ ತೆರಳಿರುವುದು ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಆಸ್ಪತ್ರೆಯಲ್ಲಿನ ಸೌಲಭ್ಯಗಳ ಕೊರತೆ, ರೋಗಿಗಳ ಸಂಬಂಧಿಗಳ ಆರೋಪಗಳು ಹಾಗೂ ಲಂಚದ ಆರೋಪಗಳ ಕುರಿತು ಜಿಲ್ಲಾಡಳಿತ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮಗ್ರ ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂಬ ಒತ್ತಾಯವಾಗಿದೆ ಆರೋಗ್ಯ ಇಲಾಖೆ ಸಚಿವರಾದ ಯು.ಟಿ ಖಾದರ್ ಅವರು ಚಿತ್ರದುರ್ಗ ಜಿಲ್ಲಾ ಅಸ್ಪತ್ರೆಯ ಸಂಪೂರ್ಣ ವರದಿಯನ್ನು ಸಂಗ್ರಹಿಸಿ ಅಧಿಕಾರಿಗಳು ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ, ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳು ಮತ್ತು ಅವರ ಸಂಬಂಧಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ರಸ್ತೆಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಸೌಲಭ್ಯಗಳ ಕುರಿತು ಸಮಸ್ಯೆಗಳಿವೆ. ರೋಗಿಗಳು ಹಾಗೂ ಅವರ ಕುಟುಂಬಸ್ಥರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ ಆದರೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಜಿಲ್ಲೆಯ ಮುಖ್ಯ ಕೇಂದ್ರದ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದರೆ ಇಲ್ಲಿನ ಆಡಳಿತ ವ್ಯವಸ್ಥೆ ಯಾವ ಸ್ಟ್ರಗಟ್ಟಿಗೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಳ್ಳಿ ಭಾಗದ ಜನರು ತಮ್ಮ ಊರುಗಳಿಂದಲೇ ಕುಡಿಯುವ ನೀರಿನ ಬಾಟಲ್ ಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಜಿಲ್ಲಾಡಳಿತಕ್ಕೆ ಮುಖಭಂಗವಾದಂತೆ ಡಿ.ಎಸ್ ಹಳ್ಳಿ ರೋಗಿಯ ಸಂಬಂಧಿ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೆಡಿಕಲ್ ಕಾಲೇಜು ಡೀನ್‌ಗೆ ಮುತ್ತಿಗೆ, ಸ್ಥಳದಲ್ಲಿ ಗೊಂದಲ

ಜಿಲ್ಲಾಧಿಕಾರಿಗಳ ಕಾರಿಗೆ ಅಡ್ಡವಾಗಿ ಪ್ರತಿಭಟನೆ ನಡೆಸಿದ ಘಟನೆಯ ನಂತರ ರೋಗಿಗಳ ಸಂಬಂಧಿಗಳು ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಯುವರಾಜ್ ಅವರನ್ನೂ ಪ್ರಶ್ನಿಸಲು ಮುಂದಾದರು. ಆಸ್ಪತ್ರೆಯಲ್ಲಿನ ಸಮಸ್ಯೆಗಳಿಗೆ ಉತ್ತರ ನೀಡುವಂತೆ ಒತ್ತಾಯಿಸಿ ಡೀನ್‌ಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ರೋಗಿಗಳ ಸಂಬಂಧಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಡೀನ್ ಅವರನ್ನು ಮಾತನಾಡಿಸಲು ಸಂಬಂಧಿಗಳು ಮುಂದಾದಾಗ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Related Posts

Leave a Reply

Your email address will not be published. Required fields are marked *