Saturday, September 05, 2026
Menu

ಭಾರತ ಚಂದ್ರನ ತಲುಪಿದರೂ ಜಾತಿ ಪಿಡುಗು ಮುಂದುವರಿಕೆ ವಿಷಾದಕರ: ಬಾಂಬೆ ಹೈಕೋರ್ಟ್‌

ಭಾರತವು ಚಂದ್ರನತ್ತ ತಲುಪಿದ ಜೊತೆ ಹತ್ತು ಹಲವು ಬಾಹ್ಯಾಕಾಶ ಸಾಧನೆಗಳನ್ನು ಮಾಡುತ್ತಾ ಬಂದಿದೆ, ಆದರೆ ಸಮಾಜದಲ್ಲಿ ಜಾತಿ ವ್ಯವಸ್ತೆಯೆಂಬ ಪಿಡುಗು ಇನ್ನೂ ಮುಂದುವರಿಯುತ್ತಿರುವುದು ವಿಷಾದಕರ ಎಂದು ಬಾಂಬೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ (ಮಲಮೂತ್ರವನ್ನು ಕೈಯಿಂದ ಸ್ವಚ್ಛಗೊಳಿಸುವಿಕೆ) ವೇಳೆ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಅಪಾಯಕಾರಿ ಸ್ವಚ್ಛತಾ ಕಾರ್ಯದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳು ಮತ್ತು ಉದ್ಯೋಗದಾತರ ಮೇಲೆ ಮಾತ್ರ ಹೊರಿಸುವ ಮಹಾರಾಷ್ಟ್ರ ಸರ್ಕಾರದ ನೀತಿಯ ಒಂದು ಭಾಗವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಖಾಸಗಿ ಸಂಸ್ಥೆಗಳು ಅಥವಾ ಗುತ್ತಿಗೆದಾರರ ಮೂಲಕ ಕೆಲಸ ಮಾಡುವ ಕಾರ್ಮಿಕರ ನಡುವೆ ಪರಿಹಾರದ ವಿಚಾರದಲ್ಲಿ ತಾರತಮ್ಯ ಮಾಡಲಾಗದು ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. 2013ರ ಮ್ಯಾನುಯಲ್ ಸ್ಕ್ಯಾವೆಂಜರ್ಸ್‌ ಕಾಯ್ದೆ ಕಾರ್ಮಿಕರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ಯಾವುದೇ ಭೇದಭಾವ ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ.

ಮೃತಪಟ್ಟ ಕಾರ್ಮಿಕರ ಅವಲಂಬಿತರಿಗೆ ರಾಜ್ಯ ಸರ್ಕಾರವೇ ತಕ್ಷಣ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅಗತ್ಯವಿದ್ದರೆ ಸಂಬಂಧಪಟ್ಟ ಖಾಸಗಿ ಸಂಸ್ಥೆ ಅಥವಾ ಉದ್ಯೋಗದಾತರಿಂದ ಆ ಮೊತ್ತ ವಸೂಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಹೇಳಿದೆ. ಜಾತಿ ವ್ಯವಸ್ಥೆಯಿಂದ ಸಮಾಜದ ನಿರ್ದಿಷ್ಟ ವರ್ಗದ ಜನರು ಮಾನವ ಘನತೆಗೆ ವಿರುದ್ಧವಾದ ಕೆಲಸ ಮಾಡಲು ಒತ್ತಾಯಿಸುವುದು ಕಳವಳಕಾರಿ ವಿಚಾರ. ಸಂವಿಧಾನ ಪ್ರತಿ ನಾಗರಿಕನಿಗೂ ಸಮಾನ ಕಾನೂನು ರಕ್ಷಣೆಯ ಭರವಸೆ ನೀಡಿದೆ. ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದಿದ್ದರೂ ಜಾತಿ ವ್ಯವಸ್ಥೆಯ ಸಾಮಾಜಿಕ ಪಿಡುಗಿನಿಂದ ದೇಶ ಮುಕ್ತವಾಗಿಲ್ಲ ಎಂದು ಅತೃಪ್ತಿ ಹೊರ ಹಾಕಿದೆ.

Related Posts

Leave a Reply

Your email address will not be published. Required fields are marked *