ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ೨೦೨೦ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ದಿಶಾ ಅವರದು ಆತ್ಮಹತ್ಯೆಯಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ತಂದೆ ಸತೀಶ್ ಸಾಲ್ಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎಫ್ಐಆರ್ ದಾಖಲಿಸಿಕೊಂಡು ಸಿಬಿಐನ ಅನುಭವಿ ಅಧಿಕಾರಿಯಿಂದ ತನಿಖೆ ನಡೆಸುವಂತೆ ಆದೇಶಿಸಿದೆ. ತನಿಖೆ ಮುಗಿಯುವವರೆಗೂ ಯಾರನ್ನೂ ಆರೋಪಿ ಎಂದು ಉಲ್ಲೇಖಿಸದೆ ಘಟನೆಯ ಹಿಂದಿನ ಎಲ್ಲಾ ಅಂಶಗಳನ್ನು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ದಿಶಾ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ರಂಜಿತ್ಸಿನ್ಹ ರಾಜ ಭೋನ್ಸಾಲೆ ಅವರಿದ್ದ ಬಾಂಬೆ ಹೈಕೋರ್ಟ್ನ ಪೀಠ, ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳಕ್ಕೆ ಆದೇಶ ನೀಡಿದೆ. ಪ್ರಕರಣ ಇತ್ಯರ್ಥವಾಗದಿದ್ದರೆ ಸತೀಶ್ ಸಾಲ್ಯಾನ್ ಮೇಲ್ಮನವಿ ಸಲ್ಲಿಸಬಹುದು ಎಂದೂ ಕೋರ್ಟ್ ಹೇಳಿದೆ.
ಸುಶಾಂತ್ ಸಿಂಗ್ ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗುವ ಕೆಲವು ದಿನಗಳ ಮೊದಲು ದಿಶಾ ಜೂನ್ 8 2020ರಂದು ಮುಂಬೈನ ಮಲಾಡ್ ಪ್ರದೇಶದ ವಸತಿ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಪೊಲೀಸರು ತನಿಖೆ ನಡೆಸಿ, ದಿಶಾ ಸಾವನ್ನು ಆತ್ಮಹತ್ಯೆ ಎಂದು ಘೋಷಿಸಿದ್ದರು.


