Menu

ಸೈಬರ್‌ ವಂಚನೆ ಜಾಲ: ಇಬ್ಬರನ್ನು ಬಂಧಿಸಿದ ಇಡಿ

Cyber fraud

ದೇಶದಲ್ಲಿ ವ್ಯಾಪಿಸಿರುವ ಸೈಬರ್‌ ವಂಚನೆ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯವು ತನಿಖೆ ತೀವ್ರಗೊಳಿಸಿದ್ದು, ಇಬ್ಬರನ್ನು ಬಂಧಿಸಿದೆ. ಜಾಲದಲ್ಲಿ 30,000 ಕೋಟಿ ರೂ. ಬ್ಯಾಂಕ್ ಮತ್ತು ನಗದು ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಫಹೀಮ್ ಮೊಯಿನ್ ಹುಸೇನ್ ಸಯ್ಯದ್ ಮತ್ತು ನಯೀಮ್ ಮುಯೀನ್ ಸಯ್ಯದ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿದ ಇಡಿ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ನ್ಯಾಯಾಲಯವು ಆರೋಪಿಗಳನ್ನು ಗೋವಾದ ಪಣಜಿಗೆ ಕರೆದೊಯ್ಯಲು ಅನುಮತಿಸಿದೆ.

ಗೋವಾದ ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ 2025ರ ಮೇ ಮತ್ತು ಜೂನ್ ನಡುವೆ 2.60 ಕೋಟಿ ರೂ. ಸೀಕ್ರೆಟ್ ಸೂಪರ್‌ವಿಷನ್ ಅಕೌಂಟ್‌ ಗಳಿಗೆ ವರ್ಗಾಯಿಸುವಂತೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯ ವೇಳೆ ಭಾರಿ ಪ್ರಮಾಣದ ಸೈಬರ್ ವಂಚನೆ ಜಾಲ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಂಚನೆಯಿಂದ ಪಡೆದ ಹಣವನ್ನು ನಾನಾ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಕ ನಗದಾಗಿ ಹಿಂಪಡೆದು ಆರ್‌ಬಿಐ ಪರವಾನಗಿ ಪಡೆದ ಹಣ ಬದಲಾವಣೆ ಸಂಸ್ಥೆಗಳ ಮೂಲಕ ವಿದೇಶಿ ಕರೆನ್ಸಿಗೆ ಪರಿವರ್ತಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಸೈಬರ್ ಕ್ರಿಮಿನಲ್ ಜಾಲಕ್ಕೆ ಸಂಬಂಧಿಸಿದಂತೆ 300 ಸಂತ್ರಸ್ತರ ದೂರುಗಳ ಬಗ್ಗೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 150ರಿಂದ 160 ಎಫ್‌ಐಆರ್‌ಗಳು ದಾಖಲಾಗಿರುವ ಕುರಿತು ಪರಿಶೀಲನೆ ಮುಂದುವರಿಸಿದೆ. ಸಂತ್ರಸ್ತರಿಗೆ ಆಗಿರುವ ವಂಚನೆಯ ಮೊತ್ತ 4,000 ಕೋಟಿ ರೂ. ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ತನಿಖೆಯ ಭಾಗವಾಗಿ ಜುಲೈನಲ್ಲಿ ಗೋವಾ ಮತ್ತು ಮುಂಬೈನಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿತ್ತು. ಆಗಸ್ಟ್ 21ರಂದು ಮತ್ತೊಂದು ಸುತ್ತಿನ ಶೋಧ ನಡೆಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ 3.25 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಕೆಲವು ನಕಲಿ ಕಂಪನಿಗಳ ಹೆಸರಿನಲ್ಲಿ ಚಾಲಕರು ಮತ್ತು ಕಡಿಮೆ ಆದಾಯದ ಉದ್ಯೋಗಿಗಳನ್ನು ನಿರ್ದೇಶಕರನ್ನಾಗಿ ತೋರಿಸಿರುವುದು ಪತ್ತೆಯಾಗಿದೆ.

Related Posts

Leave a Reply

Your email address will not be published. Required fields are marked *