Menu

ತಮಿಳುನಾಡಿಗೆ ಕಾವೇರಿ: ಸುಪ್ರೀಂನಿಂದ ಅರ್ಜಿ ವಿಚಾರಣೆ ಮುಂದೂಡಿಕೆ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ತಮಿಳುನಾಡು ಪರ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕ ನಮಗೆ ಹರಿಸಭೇಕಿರುವ ಪರಮಾಣದಲ್ಲಿ ನೀರು ಹರಿಸುತ್ತಿಲ್ಲ, ಅಲ್ಪ ಪ್ರಮಾಣದಲ್ಲಿ ನೀರು ಹರಿಸುತ್ತಿದೆ ಎಂದು ವಾದಿಸಿದರು.

ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಗಳನ್ನು ಪಾಲಿಸಬೇಕು. ಆದರೆ ಕರ್ನಾಟಕ ತನ್ನ ರೈತರಿಗೆ ನೀರು ಹರಿಸುತ್ತಿದ್ದು, ತಮಿಳುನಾಡಿಗೆ ಹರಿಸಲು ಮಾತ್ರ ನೀರಿನ ಕೊರತೆ ಇದೆ ಎಂದು ಹೇಳುತ್ತಿದೆ ಎಂದು ವೈದ್ಯನಾಥನ್ ಕೋರ್ಟ್‌ ಗಮನಕ್ಕೆ ತಂದರು. ಕರ್ನಾಟಕ ಪರ ವಕೀಲರು ರಾಜ್ಯವು ಈಗಾಗಲೇ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ತಿಳಿಸಿದರು. ನೀರು ಬಿಡುಗಡೆ ಮತ್ತು ಜಲಾಶಯಗಳ ಸ್ಥಿತಿಗತಿ ಸೇರಿದಂತೆ ಪ್ರಸ್ತುತ ಪರಿಸ್ಥಿತಿ ವಿವರಿಸಿದರು.

ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗ ಸಮಸ್ಯೆ ಏನಿದೆ, ಸಮಸ್ಯೆ ಇದ್ದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಿ ಎಂದು ಸೂಚಿಸಿತು. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಡೆಯಲಿರುವುದನ್ನು ಪರಿಗಣಿಸಿದ ಪೀಠ, ಆ ಸಭೆಗಳಲ್ಲಿ ಹೊರಬರುವ ಹೊಸ ಆದೇಶಗಳು ಹಾಗೂ ಶಿಫಾರಸುಗಳನ್ನು ಗಮನಿಸಿದ ಬಳಿಕ ಪ್ರಕರಣದ ವಿಚಾರಣೆ ಮುಂದುವರಿಸುವುದು ಸೂಕ್ತ ಎಂದು ಹೇಳಿದೆ.

ತಮಿಳುನಾಡು ಪರ ವಕೀಲರು ಮುಂದಿನ ಸೋಮವಾರವೇ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಸಮ್ಮತಿಸಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಯ ವೇಳೆ ಅಗತ್ಯ ಅಂಕಿ-ಅಂಶಗಳು ಹಾಗೂ ನೀರು ಬಿಡುಗಡೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಬರುವಂತೆ ಎರಡೂ ರಾಜ್ಯಗಳಿಗೆ ಸೂಚಿಸಿದೆ.

Related Posts

Leave a Reply

Your email address will not be published. Required fields are marked *