ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಯುವಜನರ ವಿರುದ್ಧ ಸರ್ಕಾರ ಮತ್ತು ಪೊಲೀಸರು ದಾಖಲಿಸುತ್ತಿರುವ ಸುಳ್ಳು ಪ್ರಕರಣಗಳನ್ನು ಎದುರಿಸಲು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಉಚಿತ ಕಾನೂನು ನೆರವು ಹಾಗೂ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ ಸೌರವ್ ದಾಸ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಪಿಲ್ ಸಿಬಲ್, ದೇಶಾದ್ಯಂತ ಶಾಂತಿಯುತವಾಗಿ ಹಕ್ಕುಗಳಿಗಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಎಲ್ಲೆಲ್ಲಿ, ಎಂಥ ಕ್ರಮ ಜರುಗಿಸಲಾಗಿದೆ ಹಾಗೂ ಯಾರು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಸಿಜೆಪಿ ಬಲವಾದ ಚೌಕಟ್ಟನ್ನು ರೂಪಿಸಲಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಪ್ರತಿಭಟನಾಕಾರರೂ ಉಚಿತ ಕಾನೂನು ನೆರವು ಪಡೆಯಲು ಹಾಗೂ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಲು ಬಯಸುವ ವಕೀಲರು ತಮ್ಮ ಹೆಸರು ಮತ್ತು ವಿವರಗಳನ್ನು ನೋಂದಾಯಿಸಿಕೊಳ್ಳಲು ಪ್ರತ್ಯೇಕ ವೆಬ್ಸೈಟ್ ಶೀಘ್ರವೇ ಲಾಂಚ್ ಆಗಲಿದೆ ಎಂದರು.
ಕಾನೂನನ್ನು ದುರುಪಯೋಗಪಡಿಸಿಕೊಂಡು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧಎಲ್ಲೆಲ್ಲಿ ಸುಳ್ಳು ಕೇಸುಗಳನ್ನು ಹಾಕಲಾಗುತ್ತದೆಯೋ, ಅಲ್ಲೆಲ್ಲಾ ನಮ್ಮ ವಕೀಲರು ಉಚಿತವಾಗಿ ಅವರ ಪರವಾಗಿ ನಿಲ್ಲಲಿದ್ದಾರೆ. ನಾನು 1 ಕೋಟಿ ರೂ. ನೀಡುತ್ತಿದ್ದು, ದೇಶದ ಇತರ ವಕೀಲರು ಹಾಗೂ ಸಾರ್ವಜನಿಕರು ಸಹ ಈ ನಿಧಿಗೆ ತಮ್ಮ ಕೈಲಾದ ದೇಣಿಗೆ ನೀಡಬೇಕು ಎಂದು ಸಿಬಲ್ ಮನವಿ ಮಾಡಿದರು.
ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿ, ಪ್ರತಿಭಟನೆಗಳು ಶಮನಗೊಂಡ ನಂತರ ಸರ್ಕಾರವು ಪ್ರತ್ಯೇಕವಾಗಿ ವ್ಯಕ್ತಿಗಳನ್ನು ಗುರಿಮಾಡಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ತಂತ್ರ ಅನುಸರಿಸುತ್ತಾ ಬಂದಿದೆ. ಹಿಂದಿನ ಪ್ರಮುಖ ಚಳವಳಿಗಳಲ್ಲೂ ಸರ್ಕಾರ ಇದೇ ತಂತ್ರ ಬಳಸಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ, ಪ್ರತಿಭಟನೆ ಹಿಂಪಡೆಯುವ ಮುನ್ನ ಹಾಗೂ ನಂತರವೂ ನಾವು ಕಪಿಲ್ ಸಿಬಲ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಕಾನೂನು ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಯುವಜನರ ಸ್ವಯಂಪ್ರೇರಿತ ಚಳವಳಿಯನ್ನು ರಾಜಕೀಯ ಪ್ರೇರಿತ ಪಿಐಎಲ್ಗಳಾಗಲಿ ಅಥವಾ ಸಮಾಜಘಾತುಕ ಶಕ್ತಿಗಳಾಗಲಿ ಹಳಿ ತಪ್ಪಿಸದಂತೆ ತಡೆಯುವುದು ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.


