ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿ ಅದರ ವೀಡಿಯೊ ರೆಕಾರ್ಡ್ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಪತ್ನಿ ಕೊನೆ ಗಳಿಗೆಯಲ್ಲಿ ಪ್ರಾಣಸಂಕಟದಿಂದ ಒದ್ದಾಡುವುದನ್ನು ಆಕೆಯ ತಂದೆ, ತಾಯಿಗೆ ವೀಡಿಯೊ ಕಾಲ್ ಮಾಡಿ ತೋರಿಸಿದ್ದಾನೆ.
23 ವರ್ಷದ ಭಾಗ್ಯಶ್ರೀ ಉರ್ಫ್ ಪ್ರಗತಿ ಜಗಳೂರು ಕೊಲೆಯಾದ ಮಹಿಳೆ, ಆಕೆಯ ಪತಿ ಪ್ರವೀಣ್ ಜಗಳೂರು ಕೊಲೆ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.
ದಂಪತಿಯ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು, ಕೊಲೆ ದಿನವೂ ಇಬ್ಬರ ನಡುವೆ ವಾಗ್ವಾದವಾಗಿದ್ದು ಬಳಿಕ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಪತಿಯ ವಿರುದ್ಧ ಕೊಲೆ ಆರೋಪ ದಾಖಲಾಗಿದೆ.
ಕೊಲೆಯಾಗಿರುವ ಪತ್ನಿಯ ಕೆಲವು ಕ್ಷಣಗಳನ್ನು ಆರೋಪಿ ಪತಿ ಮೊಬೈಲ್‌ನಲ್ಲಿ ವೀಡಿಯೊ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಆ ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅನೈತಿಕ ಸಂಬಂಧ ಕುಟುಂಬದೊಳಗಿನ ಕಲಹಕ್ಕೆ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ. ಆದರೆ ಈ ಆರೋಪ ಸಾಬೀತಾಗಿಲ್ಲ.
ಭಾಗ್ಯಶ್ರೀ ಮತ್ತು ಪ್ರವೀಣ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಬ್ಬ ಗಂಡು ಮಗು ಇದ್ದಾನೆ. ಕೆಲವು ದಿನಗಳ ಹಿಂದೆ ಕುಟುಂಬ ಕಲಹದಿಂದ ಬೇಸತ್ತ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದರು. ಪ್ರವೀಣ್ ಆಕೆಯನ್ನು ಮತ್ತೆ ಮನೆಗೆ ಕರೆತಂದಿದ್ದ ಎನ್ನಲಾಗಿದೆ.
ಸ್ಥಳೀಯರು ಮತ್ತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


