Menu

ವಿದ್ಯಾರ್ಥಿಗಳಿಗೆ ಆಜ್ಞೆ ಮಾಡಬೇಕಿಲ್ಲ, ಅರ್ಥಪೂರ್ಣ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಿ: ಮೋಹನ್‌ ಭಾಗವತ್‌

ಇಂದಿನ ಯುವ ವಿದ್ಯಾರ್ಥಿಗಳು ದಾರಿ ತಪ್ಪಿಲ್ಲ, ಅವರು ದೂರದೃಷ್ಟಿಯುಳ್ಳವರು. ಹಾಗಾಗಿ ಅವರನ್ನು ಅರ್ಥಮಾಡಿಕೊಳ್ಳಲು ಆಜ್ಞೆ ನೀಡುವುದಲ್ಲ, ಬದಲಾಗಿ ಅವರೊಂದಿಗೆ ಅರ್ಥಪೂರ್ಣ ಚರ್ಚೆ ನಡೆಸಿ  ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಿಂದ ದೆಹಲಿಯ ಬೀದಿಗಳಲ್ಲಿ ಹಲವು ವರ್ಷಗಳಲ್ಲಿ ಕಾಣದ ರೀತಿಯಲ್ಲಿ ಉದ್ವಿಗ್ನತೆ, ಉಗ್ರ ಹೋರಾಟಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು ಕೇಂದ್ರ
ಸರ್ಕಾರಕ್ಕೆ ಈ  ಸಲಹೆ ನೀಡಿದ್ದಾರೆ.
ವಿಶ್ವ ಮಾಂಗಲ್ಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಪೀಳಿಗೆಗಳ ನಡುವಿನ ಹೆಚ್ಚುತ್ತಿರುವ ಅಂತರದ ಬಗ್ಗೆ  ಪ್ರಸ್ತಾಪಿಸಿ, ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ನಾವು ಯುವಕರಾಗಿದ್ದಾಗ ಅದು  ವಿಧೇಯತೆಯ ಯುಗವಾಗಿತ್ತು. ಈಗ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಸ್ವಾವಲಂಬಿಗಳಾಗಿ ಬದುಕುವ ವಿದ್ಯೆ ಕಲಿಯುತ್ತಿದ್ದಾರೆ ಎಂದು ಅವರು ಹೇಳಿದರು.

ಇಂದಿನ ಕಿರಿಯ ಪೀಳಿಗೆಯು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಹೊಂದಿದೆ, ಹಾಗಾಗಿ ಅವರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದು ಅನಿವಾರ್ಯವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು. ಅದೇ ಸಮಯದಲ್ಲಿ, ಕುಟುಂಬಗಳ ಒಳಗೆ ಮಾತುಕತೆಗಾಗಿ ಇರುವ ಅವಕಾಶವು ಕುಗ್ಗುತ್ತಿರುವುದಕ್ಕೆ  ಕಳವಳ ವ್ಯಕ್ತಪಡಿಸಿದರು. ಹೊಸ  ಪೀಳಿಗೆಯು ಪ್ರಶ್ನೆಗಳನ್ನು ಕೇಳುತ್ತದೆ. ನಾವು ಅವರಿಗೆ ತರ್ಕವನ್ನು ವಿವರಿಸಬೇಕು. ನಾವು ಅವರಿಗೆ ಸಾಕಷ್ಟು ಪ್ರೀತಿಯನ್ನು ನೀಡಬೇಕು. ಅವರೊಂದಿಗೆ ಸಮಯ ಕಳೆಯಬೇಕು. ಅವರೊಂದಿಗೆ ಸಂವಹನ ನಡೆಸಬೇಕು ಎಂದು ಭಾಗವತ್ ಹೇಳಿದರು.

ಯುವಕರ ವಿಶ್ವಾಸವನ್ನು ಗಳಿಸಲು ಆಜ್ಞೆಗಳಲ್ಲ, ಬದಲಾಗಿ ಸಂಭಾಷಣೆಯ ಅಗತ್ಯವಿದೆ. ಹೊಸ ಪೀಳಿಗೆಗೆ ಸುರಕ್ಷತಾ ಭಾವನೆಯನ್ನು ನೀಡಬೇಕು. ನಾವು ಸಂವಹನ ನಡೆಸಬೇಕು. ಚರ್ಚೆ ಮಾಡಬೇಕು. ಆದೇಶಗಳಲ್ಲ, ಒಮ್ಮತ ಮೂಡಿಸಬೇಕು ಎಂದರು.

ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಭಾಗವತ್ ಉಲ್ಲೇಖಿಸದಿದ್ದರೂ, ಅವರ ಈ ಹೇಳಿಕೆಯ ಸಮಯವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿಜೆಪಿ ಪ್ರತಿಭಟನೆಗಳ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥರು
ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಈ ಪ್ರತಿಭಟನೆಗಳು ಈಗ ಇತರ ರಾಜ್ಯಗಳಿಗೂ ಹಬ್ಬಿವೆ. ಸಂಸತ್ತಿನಿಂದ  ಕೆಲವೇ ಮೀಟರ್ ದೂರದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭೀಕರ ಘರ್ಷಣೆ ನಡೆದ ಜುಲೈ 20 ರ ಹಿಂಸಾಚಾರವು ಸಾರ್ವಜನಿಕರ ಆಕ್ರೋಶವನ್ನು  ಹೆಚ್ಚಿಸಿದೆ.

ಆರ್‌ಎಸ್‌ಎಸ್ ಮುಖ್ಯಸ್ಥರ ಈ ಮೌನವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.ಮೋಹನ್ ಭಾಗವತ್ ಜೀ, ಜಂತರ್ ಮಂತರ್‌ನಲ್ಲಿ ನಡೆದ ಘಟನೆಗಳ ಕುರಿತು ಕಳೆದ ಒಂದು ತಿಂಗಳಿಂದ ನಿಮ್ಮ ಮೌನವು ನಿಮ್ಮ ಉಪದೇಶಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಮಾತನಾಡುತ್ತಿದೆ ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.

ನೀಟ್‌ ಹಗರಣ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.ಆದರೆ ಕೇಂದ್ರ ಸರ್ಕಾರ ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸರಣಿ ಕ್ರಮಗಳನ್ನು ಕೈಗೊಂಡಿದ್ದರೂ, ಸಚಿವರ ರಾಜೀನಾಮೆಯ ಬೇಡಿಕೆಯನ್ನು ತಳ್ಳಿಹಾಕಿದೆ.  ಪ್ರತಿಭಟನೆಯ ನೇತೃತ್ವ ವಹಿಸಿರುವ ಸಿಜೆಪಿ ಸರ್ಕಾರದೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದ್ದರೂ ಬೇಡಿಕೆಗಳಿಂದ ಹಿಂದೆ ಸರಿಯಲು ಸಿಜೆಪಿ  ನಿರಾಕರಿಸಿದೆ.

Related Posts

Leave a Reply

Your email address will not be published. Required fields are marked *