ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಬೆಂಗಳೂರಿನ ಕಗ್ಗಲಿಪುರ ಬಳಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ 11 ಸದಸ್ಯರಿದ್ದು, ಗುತ್ತಿಗೆ ನಿಯಮ ಉಲ್ಲಂಘನೆ, ದಲಿತರ ಭೂಮಿ ಒತ್ತುವರಿ ಮತ್ತು ಸಾರ್ವಜನಿಕ ಆಸ್ತಿ ದುರ್ಬಳಕೆ ಸೇರಿದಂತೆ ಹಲವು ಆರೋಪಗಳ ಕುರಿತು ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯ ಆಧಾರದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಂತಯ್ಯ ಎಸ್. ಹೊಸಮಠ ಈ ಆದೇಶ ಹೊರಡಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ ನೀಡಿದ್ದಾರೆ.
1981ರಲ್ಲಿ ಸ್ಥಾಪನೆಯಾಗಿರುವ ದಿ ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ ಮತ್ತು ಅಂಗಸಂಸ್ಥೆಗಳಾದ ವೇದ ವಿಜ್ಞಾನ ಮಹಾ ವಿದ್ಯಾಪೀಠ ಇನ್‌ಸ್ಟಿಟ್ಯೂಟ್, ಸುಮೇರು ಗ್ಲೋಬಲ್ ಸಪೋರ್ಟ್ ಸಲ್ಯೂಷನ್ಸ್ ಮತ್ತು ಸುಮೇರು ರಿಯಾಲ್ಟಿ . ಸೇರಿದಂತೆ ಕೆಲವು ವ್ಯಕ್ತಿಗಳು ಕಗ್ಗಲಿಪುರದ ಸರ್ವೇ ನಂಬರ್ 46 ಹಾಗೂ ಸುತ್ತಮುತ್ತಲಿನ ಬಿ.ಎಂ. ಕಾವಲ್, ಅಗ್ರ ಮತ್ತು ಉತ್ತರಿ ಗ್ರಾಮಗಳಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಕಗ್ಗಲಿಪುರದ ಸರ್ವೇ ನಂ. 46 ರಲ್ಲಿನ 41 ಎಕರೆ ಸರ್ಕಾರಿ ಗೋಮಾಳ ಜಮೀನನ್ನು 1985ರಲ್ಲಿ ವಾರ್ಷಿಕ ಎಕರೆಗೆ 500 ರೂ. ದರದಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿಯು 2015 ರಲ್ಲೇ ಮುಕ್ತಾಯಗೊಂಡಿದ್ದರೂ, ಸಂಸ್ಥೆಯು ಅಕ್ರಮವಾಗಿ ಜಮೀನನ್ನು ವಶದಲ್ಲೇ ಇಟ್ಟುಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.
ಆರ್ಟ್ ಆಫ್ ಲಿವಿಂಗ್ ಅಧೀನದಲ್ಲಿರುವ ಒಟ್ಟು 270 ಎಕರೆ ಭೂಮಿಯಲ್ಲಿ 150 ಎಕರೆ ಭೂಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿದ ಜಮೀನಾಗಿದೆ ಎಂದು ದಲಿತ ಸಂಘಟನೆಗಳ ಸಭೆಯಲ್ಲಿ ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ಅಗತ್ಯ ಎಂದು ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಅಕ್ಟೋಬರ್ 2025 ರಲ್ಲಿ ಸಹಾಯಕ ಭೂದಾಖಲೆಗಳ ನಿರ್ದೇಶಕರು ನಡೆಸಿದ ಜಂಟಿ ಸಮೀಕ್ಷೆಯಲ್ಲಿ, ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿ ಬಳಸಿರುವುದು ಮತ್ತು ಭೂ ಬಳಕೆ ನಿಯಮ ಉಲ್ಲಂಘಿಸಿರುವ ಅಂಶಗಳು ಪತ್ತೆಯಾಗಿವೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಶ್ರೀ ಶ್ರೀ ರವಿಶಂಕರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿತ್ತು. ಈಗ ಸರ್ಕಾರ ಭೂ ಅತಿಕ್ರಮಣ, ರಾಜಕಾಲುವೆ, ಕೆರೆ ಮತ್ತು ಸಾರ್ವಜನಿಕ ಆಸ್ತಿಗಳ ದುರ್ಬಳಕೆಯ ಸಮಗ್ರ ಪರಿಶೀಲನೆಗಾಗಿ ಕಂದಾಯ ಕಾಯ್ದೆಯಡಿ ಈ ಪ್ರತ್ಯೇಕ ಎಸ್‌ಐಟಿಯನ್ನು ರಚಿಸಿದೆ.
ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧಿಕೃತ ವಕ್ತಾರರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರದ ಎಸ್‌ಐಟಿ ರಚನೆಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯು ಸತ್ಯಾಂಶಗಳನ್ನು ಹೊರ ತರಲಿ. ಈ ವಿವಾದಕ್ಕೆ ಶಾಶ್ವತ ಅಂತ್ಯ ಕಾಣಿಸಲಿ ಎಂದಿದ್ದಾರೆ.


