Menu

ಪಾವಗಡ 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ದೇಶಕ್ಕೆ ಮಾದರಿ: ಸಿಎಂ

ಪಾವಗಡದ 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ದೇಶಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 57 ನೇ ಸಂಸ್ಥಾಪನಾ ದಿನಾಚರಣೆ  ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆರೆದ ನಿಗಮದ ಎಲ್ಲರಿಗೂ 57 ನೇ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ದೀಪ ಬೆಳಕು ನೀಡುತ್ತದೆಯಾದರೂ, ದೀಪದ ಬತ್ತಿ, ಎಣ್ಣೆ ಸುಡುತ್ತಿದ್ದರೂ ಬೆಳಕು ನೀಡುವಂತೆ ನಿಗಮದ ಎಲ್ಲ ಅಧಿಕಾರಿ ಸಿಬ್ಬಂದಿಗಳ ಸೇವೆಯೂ ಅನನ್ಯವಾಗಿದೆ. ಮೈಸೂರು ಮಹಾರಾಜರು 1902 ಮತ್ತು 1904ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಥಮ ಹೆಜ್ಜೆಯಿರಿಸಿದ್ದರು. ಇಡೀ ಏಷಿಯಾ, ಭಾರತದಲ್ಲಿ ವಿದ್ಯುತ್ ಇಲ್ಲದ ಕಾಲದಲ್ಲಿ ರಾಜ್ಯದಲ್ಲಿ ವಿದ್ಯುತ್ ಪವರ್ ಹೌಸ್ ಸ್ಥಾಪಿಸಲಾಗಿತ್ತು. ಮೈಸೂರು ಮಹಾರಾಜರು ಹಾಗೂ ದಿವಾನ್  ಸರ್ ಎಂ ವಿಶ್ವೇಶ್ವರಯ್ಯನವರು, ವಿದ್ಯುತ್ಉತ್ಪಾದನಾ ಕ್ಷೇತ್ರದಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಸಮಾರಂಭದ ಪ್ರಾರಂಭದಲ್ಲಿ ದೀಪ ಬೆಳಗುವ ಮೂಲಕ ಕತ್ತಲನ್ನು ತೊಡೆದು ಬೆಳಕು ಚೆಲ್ಲುವ ಸಂಪ್ರದಾಯ ಪಾಲಿಸಲಾಗುತ್ತದೆ ಎಂದರು.

ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದ್ದು, ನಿಮ್ಮ ಪೋಷಕರು ತಮ್ಮ ಕಷ್ಟಗಳನ್ನು ಮೀರಿ, ನಿಮಗೆ ಉತ್ತಮ ವಿದ್ಯೆಯನ್ನು ಕಲ್ಪಿಸಿದ್ದಾರೆ. ನೀವೆಲ್ಲರೂ ಪರಿಶ್ರಮದೊಂದಿಗೆ ಉತ್ತಮ ಸಾಧನೆಗಳನ್ನು ಮಾಡಬೇಕು. ಇಡೀ ವಿಶ್ವವೇ ಬೆಂಗಳೂರಿನತ್ತ ಮುಖಮಾಡಿದೆ. ಹೆಚ್ ಎಂ ಟಿ, ಇಸ್ರೋ , ಹೆಚ್ ಎ ಎಲ್ ನಂತಹ ಶ್ರೇಷ್ಠ ಸಂಸ್ಥೆಗಳನ್ನು ರಾಜ್ಯ ಕಂಡಿದೆ  ಎಂದು ಹೇಳಿದರು.

ನಾನು ಹಿಂದೆ ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಸವಾಲುಗಳ ನಡುವೆಯೂ ಸೌರ ವಿದ್ಯುತ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೆ. ಪರಿಶ್ರಮದೊಂದಿಗೆ ಶ್ರಮಿಸಿದಾಗ ಮಾತ್ರ ಫಲ ಲಭ್ಯವಾಗುತ್ತದೆ. ಇಂಧನ ಸಚಿವನಾಗಿ ಅಂದು ನಾನು ಸಲ್ಲಿಸಿದ ಸೇವೆಯು, ಸೌರವಿದ್ಯುತ್ ಅಭಿವೃದ್ಧಿ ಕ್ಷೇತ್ರಕ್ಕೆ ಅಡಿಪಾಯವಾಗಿದೆ ಎಂದರು.

ಭೂಸ್ವಾಧೀನದ ವಿಷಯವಾಗಿ ಟೀಕೆಗಳು ಎದುರಾಗುತ್ತವೆ. ಆದರೆ ಪಾವಗಡದಲ್ಲಿ ವಿದ್ಯುತ್ ಘಟಕ ಸ್ಥಾಪಿಸಲು ರೈತರ ಜಮೀನನ್ನು ನಾನು ಸ್ವಾಧೀನಪಡಿಸಿಕೊಳ್ಳಲಿಲ್ಲ. ಅಲ್ಲಿನ ರೈತರೊಂದಿಗೆ ಪಾಲುದಾರಿಕೆ ಮಾಡಿಕೊಂಡು , ರೈತರು ತಮ್ಮ ಜಮೀನಿಗೆ ತಿಂಗಳಿಗೆ ಸುಮಾರು 25 ಸಾವಿರಗಳ ಮೊತ್ತದಂತೆ 25 ವರ್ಷಗಳ ಒಪ್ಪಂದದ ವ್ಯವಸ್ಥೆ ಕಲ್ಪಿಸುವ ಮೂಲಕ ಪಾವಗಡ 2400 ಮೆಗಾವ್ಯಾಟ್ ಉತ್ಪಾದಿಸುವ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು,ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ನಿಗಮವು 1.61 ಕೋಟಿ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, 20ಸಾವಿರ ರೈತರಿಗೆ ಉಚಿತ ವಿದ್ಯುತ್ , ಒಟ್ಟು 30,000 ಕೋಟಿ ರೂ.ಗಳ ಸೌಲಭ್ಯಗಳನ್ನು ನಿಗಮದ ಮೂಲಕ ರಾಜ್ಯದ ಜನರಿಗೆ ನೀಡಲಾಗುತ್ತಿದೆ.  2016 ರಲ್ಲಿ ಜೋಗ ಸಮೀಪದ ಶರಾವತಿ ಜಲವಿದ್ಯುದಾಗಾರದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೂ ಅಂದಿನ ಬಿಜೆಪಿ ಸರ್ಕಾರ ರಾಜ್ಯ ಹಾಗೂ ಕೇಂದ್ರದಲ್ಲಿದ್ದರೂ, ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ, ರಾಜ್ಯದ ಜನ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿತು ಎಂದು ವಿವರಿಸಿದರು.

ಆಂಧ್ರದವರು ನಮಗಿಂತ ಮುಂಚೆಯೇ ಅದನ್ನು ಸಿದ್ಧ ಮಾಡಿದ್ದಾರೆ. ಬಿಜೆಪಿ ಸ್ನೇಹಿತರಿಗೆ ನವದೆಹಲಿಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಅವರಿಗೆ ಮಾಡಲಾಗಲಿಲ್ಲ.ಆದರೆ ಈಗ ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಯಾವುದೇ ಅಡೆತಡೆಗಳು ಬಂದರೂ ಅದನ್ನು ಮಾಡಲೇಬೇಕಿದೆ. ಶ್ರಮವಿಲ್ಲದೆ ಯಾವುದೂ ಕೆಲಸವಾಗುವುದಿಲ್ಲ.  394 ಮೆ .ವ್ಯಾಟ್ ಸಾಮರ್ಥ್ಯ ಅನಿಲ ವಿದ್ಯುತ್ ಸ್ಥಾವರವನ್ನು ಯಲಹಂಕ ದಲ್ಲಿ ಸ್ಥಾಪಿಸುವ ಮೂಲಕ ನಿಮಿಷಗಳಲ್ಲಿ ಬೆಂಗಳೂರಿಗೆ ವಿದ್ಯುತ್ ನೀಡಲು ಸಾಧ್ಯವಾಗಿದೆ ಎಂದರು.

ಕೆಪಿಸಿಯಲ್ಲಿ ಇತರ ಸಂಸ್ಥೆಗಳಿಗಿಂತ ಹೆಚ್ಚುವೇತನ ನೀಡಲಾಗುತ್ತಿದೆ. ನೌಕರರು ಇಲ್ಲಿನ ಆಡಳಿತ ಮಂಡಳಿಯಲ್ಲಿಯೂ ಇದ್ದಾರೆ. ನೌಕರರೂ ಆಡಳಿತದಲ್ಲಿ ಭಾಗಿಗಳಾಗಬೇಕೆಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ  ತೀರ್ಮಾನ ಮಾಡಿ, ಕಾರ್ಯರೂಪಕ್ಕೆ ತಂದರು. ಇಂಥ ವಿಚಾರಗಳು ಬೇರೆ ಯಾರಿಗೂ ಇಲ್ಲ ಎಂದು ತಿಳಿಸಿದರು.

ಇಂಧನ ಸಚಿವ ಕೆಜೆ ಜಾರ್ಜ್ ರವರು ಪ್ರಾಮಾಣಿಕವಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಕುಸುಮ್ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಹೊಸ ರೂಪ ನೀಡುವ ಯೋಜನೆ ನಮ್ಮದಾಗಿದ್ದು ಉದ್ಯೋಗ ಸೃಷ್ಟಿಯ ದೂರದೃಷ್ಟಿಯನ್ನು ಹೊಂದಿದ್ದೇವೆ ಎಂದರು.

Related Posts

Leave a Reply

Your email address will not be published. Required fields are marked *