Menu

ಬಿಡದಿ ಟೌನ್‌ಶಿಪ್‌ ಭೂಸ್ವಾಧೀನ ಪ್ರಶ್ನಿಸಿ ಪಿಐಎಲ್‌: ವಜಾಗೊಳಿಸಿದ ಹೈಕೋರ್ಟ್‌

ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿರುವ ಬಿಡದಿ ಟೌನ್‌ಶಿಪ್‌ ಯೋಜನೆಗೆ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿರುವುದಕ್ಕೆ ಸೂಕ್ತ ಕಾನೂನಾತ್ಮಕ ಆಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಬಿಡದಿ ಟೌನ್‌ಶಿಪ್‌ಗಾಗಿ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಕ್ರಮವನ್ನು ವಿರೋಧಿಸಿ ರಾಜೇಶ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಖುದ್ದು ಹಾಜರಾಗಿ ವಾದ ಮಂಡಿಸಿದರು.

ಸರ್ಕಾರವು 2026ರ ಜೂನ್ 10ರಂದು ಹೊರಡಿಸಿದ ಭೂಸ್ವಾಧೀನ ಅಧಿಸೂಚನೆ ಕಾನೂನುಬಾಹಿರವಾಗಿದೆ. ನಗರಾಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದರು. ಬಿಡದಿ ಭಾಗದ ರೈತರು 500ಕ್ಕೂ ಹೆಚ್ಚು ದಿನಗಳಿಂದ ಯೋಜನೆ ವಿರೋಧಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾನೂನಿನ ಪ್ರಕಾರ ಅಗತ್ಯವಿರುವ ಶೇಕಡಾ 80ರಷ್ಟು ಭೂ ಮಾಲೀಕರ ಒಪ್ಪಿಗೆಯನ್ನು ಪಡೆಯಲಾಗಿಲ್ಲ ಎಂದು ವಾದಿಸಿದರು.

ಆರ್‌ಟಿಐ ಅಡಿ ಮಾಹಿತಿ ಕೋರಿದರೂ ಸರ್ಕಾರ ಸ್ಪಷ್ಟ ಮಾಹಿತಿ ನೀಡಿಲ್ಲ. ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡುವ ಬದಲು ನಿವೇಶನ ನೀಡುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಭೂಸ್ವಾಧೀನ ಅಧಿಸೂಚನೆಗೆ ತಕ್ಷಣ ತಡೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದರು.

ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ನಗರಾಭಿವೃದ್ಧಿ ಕಾಯ್ದೆಯ ಯಾವ ನಿರ್ದಿಷ್ಟ ನಿಯಮ ಅಥವಾ ಕಾನೂನು ಇಲ್ಲಿ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಸಮರ್ಪಕ ಕಾನೂನಾತ್ಮಕ ಆಧಾರಗಳನ್ನು ಅರ್ಜಿದಾರರು ಮಂಡಿಸಲು ಸಾಧ್ಯವಾಗಲಿಲ್ಲ.

ಭೂಸ್ವಾಧೀನ ಪ್ರಕ್ರಿಯೆ ಕಾನೂನುಬಾಹಿರ, ನಿಯಮ ಪಾಲಿಸಿಲ್ಲ ಹಾಗೂ ರೈತರಿಗೆ ಸಮರ್ಪಕ ಪರಿಹಾರ ನೀಡಲಾಗುತ್ತಿಲ್ಲ ಎಂಬ ಆರೋಪಗಳನ್ನು ಸಮರ್ಥಿಸುವ ದಾಖಲೆಗಳು ಆಧಾರಗಳು ಅರ್ಜಿಯಲ್ಲಿ ಇಲ್ಲ ಎಂದ ಕೋರ್ಟ್‌ ವಜಾಗೊಳಿಸಿ ಆದೇಶ ನೀಡಿತು.

Related Posts

Leave a Reply

Your email address will not be published. Required fields are marked *