ಪದ್ಮನಾಭ ನಗರದ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಅವರ ಪಾರ್ಥಿವ ಶರೀರವನ್ನು ಇಂದು ಭಾನುವಾರ ಮಧ್ಯಾಹ್ನದ ನಂತರ ಸ್ವಗ್ರಾಮ ಹಾಸನದ ಹರದನಳ್ಳಿಗೆ ಕೊಂಡೊಯ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕುಟುಂಬ ತಿಳಿಸಿದೆ. ಸೋಮವಾರ ಹರದನಹಳ್ಳಿ ಬಳಿಯ ಮಾವಿನಕೆರೆಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.
ಪದ್ಮನಾಭನಗರದ ನಿವಾಸದಲ್ಲಿ ನಿನ್ನೆ ರಾತ್ರಿಯಿಂದ ರಾಜ್ಯದ ಗಣ್ಯರು ಚನ್ನಮ್ಮ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಇಂದು ಬೆಳಿಗ್ಗೆ ಸಾರ್ವಜನಿಕರಿಗೆ ಪದ್ಮನಾಭನಗರದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚನ್ನಮ್ಮ (೮೫) ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಒಂದು ವರ್ಷದಿಂದ ಮನೆಯಲ್ಲೇ ಸಜ್ಜುಗೊಳಿಸಿದ್ದ ಐಸಿಯುನಲ್ಲಿ ಚಿಕಿತೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ಜುಲೈ ೧೫ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾದರು.
ವೈದ್ಯ ಸತ್ಯನಾರಾಯಣ ಅವರು ಚನ್ನಮ್ಮ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ 1954 ಮೇ 25ರಂದು ಹೆಚ್.ಡಿ. ದೇವೇಗೌಡರನ್ನು ಮದುವೆಯಾಗಿದ್ದರು. ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


