Menu

ಆದಿ ಚುಂಚನಗಿರಿ ಮಠದ ಆಸ್ತಿಗೆ ನಕಲಿ ದಾಖಲೆ: 6 ಸರ್ಕಾರಿ ಅಧಿಕಾರಿಗಳು ಸೇರಿ 11ಮಂದಿ ಅರೆಸ್ಟ್‌

ನಕಲಿ ದಾಖಲೆ ಸೃಷ್ಟಿಸಿ ಆದಿ ಚುಂಚನಗಿರಿ ಮಠದ ಆಸ್ತಿಯನ್ನು ಲಪಟಾಯಿಸಲು ಪ್ರಯತ್ನ ನಡೆಸಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ 11 ಮಂದಿಯಲ್ಲಿ ಆರು ಜನ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ.

ಮೂವತ್ತು ವರ್ಷದ ಹಿಂದೆ ಆದಿಚುಂಚನಗಿರಿ ಮಠಕ್ಕೆ ಕಾಣಿಕೆ ರೂಪದಲ್ಲಿ ಬಂದಿದ್ದ 45 ಎಕರೆಯಲ್ಲಿ ಆರೋಪಿಗಳು ಆರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆಗೆ ಮುಂದಾಗಿದ್ದರು. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು 11 ಮಂದಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಆರೋಗ್ಯಸಾಮಿ, ಫ್ರಾನ್ಸಿಸ್ ಜೋಸ್ವನ್, ಶ್ರೀನಿವಾಸ, ನರೇಂದ್ರ , ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್, ಡೆಪ್ಯೂಟಿ ತಹಶೀಲ್ದಾರ್ ದೀಪಕ್, ಕೆಂಗೇರಿ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ಬಂಧಿತರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈರುತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದು, ಆರು ಎಕರೆಗೆ ಫ್ರಾನ್ಸಿಸ್, ಆರೋಗ್ಯಸ್ವಾಮಿ ಸೇರಿದಂತೆ ಹಲವು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಬ್ರೋಕರ್‌ಗಳ ಸಂಘಟಿತ ಜಾಲ ಇದರಲ್ಲಿ ಸಕ್ರಿಯವಾಗಿತ್ತು. ನಕಲಿ ದಾಖಲೆಗಳ ಆಧಾರದಲ್ಲಿ ಕೋರ್ಟ್ ಆದೇಶ ಪಡೆದು ಜಮೀನು ಕಬಳಿಸಲು ಸಂಚು ರೂಪಿಸಲಾಗಿತ್ತು. ರೆಕಾರ್ಡ್ ರೂಮ್ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಉಪ ತಹಸೀಲ್ದಾರ್ ಸೇರಿ ಹಲವರು ದಾಖಲೆ ಸೃಷ್ಟಿಗೆ ಸಹಕರಿಸಿರುವ ಸಾಧ್ಯತೆ ಇದೆ. ನಕಲಿ ವಂಶವೃಕ್ಷ, ಸಾಲಾವಳಿ ಚೀಟಿ ಸೇರಿ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *