ಕೆಆರ್ಎಸ್ ಅಣೆಕಟ್ಟೆಯಿಂದ ಕಾವೇರಿ ನೀರನ್ನು ಜಿಲ್ಲೆಯ ಎಲ್ಲಾ ನಾಲೆಗಳಿಗೂ ಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಸಂಘ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಒಣಗುತ್ತಿರುವ ಬೆಳೆಗಳಿಗೆ ತುರ್ತಾಗಿ ನೀರು ಹರಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಲು ಸರ್ಕಾರ ನೆರವಾಗಬೇಕು, ಅಣೆಕಟ್ಟೆಯಲ್ಲಿ ೯೦ ಅಡಿ ನೀರಿದ್ದರೂ ನಾಲೆಗಳಿಗೆ ಹರಿಸಲು ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ,ಎಂ.ವಿ.ಕೃಷ್ಣ, ಕನ್ನಡಸೇನೆ ಮಂಜುನಾಥ್,ಬೋರಲಿಂಗೇಗೌಡ, ಮುದ್ದೇಗೌಡ ಆಗ್ರಹಿಸಿದರು.
ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ರೈತರು ಬೆಳೆ ಬೆಳೆಯಬಾರದು ಎನ್ನುತ್ತಾರೆ, ಕೇವಲ ಪರಿಹಾರ ನೀಡುವ ಮಾತು ಹೇಳಿ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಜೆ.ಸಿ.ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು ಅರೆಬೆತ್ತಲೆಯಾಗಿ ಬಾಯಿ ಬಡಿದುಕೊಂಡು ಘೋಷಣೆ ಕೂಗಿದರು. ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಸ್ಥಳದಲ್ಲಿ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ವಿನೂತನವಾಗಿ ರೈತ ಸಂಘದ ಶಿವಳ್ಳಿ
ಚಂದ್ರು, ಕೋಣನಹಳ್ಳಿ ಜವರೇಗೌಡ, ಮರಿಚನ್ನೇಗೌಡ,ದೊರೆಸ್ವಾಮಿ, ರಾಜೇಗೌಡ, ಸುರೇಶ್, ಕುಮಾರ್, ಶಿವರಾಮ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.ರೈತರ ಬೆಳೆಗಳು ಒಣಗುತ್ತಿವೆ. ಕೃಷಿ ಕೂಲಿಕಾರರಿಗೆ ಕೂಲಿಯೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಣೆಕಟ್ಟೆಯಿಂದ ನೀರು ಹರಿಸದಿರುವ ಕಾರಣ ರೈತರನ್ನು ರಕ್ಷಿಸಲು ಬರಪೀಡಿತ ಪ್ರದೇಶವೆಂದು ಘೋಷಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ,ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಎನ್.ಸುರೇಂದ್ರ, ಅಮಾಸಯ್ಯ ಒತ್ತಾಯಿಸಿದರು.
ಮಂಡ್ಯಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಕಬ್ಬು ಬೆಳೆ ಗಳಿಗೆ “ಒಂದು ಕಟ್ಟು ಕಾವೇರಿ ನೀರು ಹರಿಸಿ-ಬೆಳೆ ಉಳಿಸಿ” ರೈತರ ಆರ್ಥಿಕ ಸಂಕಷ್ಟವನ್ನು ಪರಿಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು – ಮೈಸೂರು ರಸ್ತೆಯ ವಿಶ್ವೇ ಶ್ವರಯ್ಯ ಪ್ರತಿಮೆ ಎದುರು ನೂರಾರು ಕಾರ್ಯಕರ್ತರು ಜಮಾವಣೆಗೊಂಡು, ಬಳಿಕ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ,ಕೃಷಿ ಪ್ರಧಾನವಾದ ಜಿಲ್ಲೆ ಮಂಡ್ಯ. ರೈತರೇ-ದೇಶದ ಬೆನ್ನೆಲುಬೆಂದು ಬೊಗಳೆ ಬಿಡುವ ಅಧಿಕಾರ ಶಾಹಿ ವ್ಯವಸ್ಥೆ ರೈತರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವವರ ಜೊತೆಗೆ ಪ್ರಕೃತಿಯೂ ಮುನಿಸಿ ಕೊಂಡಿದೆ. ಇಂತಹ ಪರಿಸ್ಥಿತಿಯ ಲಾಭ ಪಡೆದು ಖಜಾನೆ ಲೂಟಿಯಾಗುತ್ತದೆ ಹೊರತಾಗಿ ರೈತನಿಗೆ ಯಾವುದೇ ನೆರವಾಗುವುದಿರುವುದು ಖಂಡನಿಯ ಎಂದರು. ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ಷೀಣಿಸಿದೆ. ಲಕ್ಷಾಂತರ ಎಕರೆ ಭೂಮಿಯಲ್ಲಿ ಕಬ್ಬು ಮತ್ತಿತರ ಬೆಳೆ ಇದೆ. ಕೆಲವು ಕಟಾವಿಗೆ ಬಂದು ಒಣಗುತ್ತಿದ್ದರೆ. ಇನ್ನು ಕೆಲವು ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಈ ಬೆಳೆ ಬೆಳೆಯಲು ರೈತರು ಸಾಕಷ್ಟು ಬಂಡವಾಳವನ್ನು ಹೂಡಿ ಬಿತ್ತನೆ ಮಾಡಿ, ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಕಟಾವಿಗೆ ಬಂದಿರುವ ಬೆಳೆಗಾದರೂ ಒಂದು ಕಟ್ಟು ಕಾವೇರಿ ನೀರು ಹರಿಸಿ-ಬೆಳೆ ಉಳಿಸಿದರೆ ಮಂಡ್ಯ ಜಿಲ್ಲೆಯ ರೈತರ ದೊಡ್ಡ ಪ್ರಮಾಣದ ನಷ್ಠವನ್ನು ಕಡಿಮೆ ಮಾಡ ಬಹುದು ಎಂದು ಹೇಳಿದರು.
ಬೆಳೆ ಉಳಿಸಲು ಕಾವೇರಿ ನೀರನ್ನು ಬಿಡುಗಡೆಗೊಳಿಸುವುದೊಂದೇ ಮಾರ್ಗ. ಸಂಪೂರ್ಣ ನಾಶವಾಗುವ ಬೆಳೆ ರಕ್ಷಣೆ ಸಾಧ್ಯವಿಲ್ಲದ ಕಾರಣ ಕಂಗಾಲಾಗಿರುವ ರೈತರಿಗೆ ಪರಿಹಾರ ಘೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರ ಸಂಕಷ ಪರಿಹರಿಸುವಲ್ಲಿ ನೆರವಾಗ ಬೇಕೆಂದು ಆಗ್ರಹಿಸಿದರು.


