Menu

ಭಾರತದ ಗಾನ ಕೋಗಿಲೆ ಎಸ್.ಜಾನಕಿ ಇನ್ನಿಲ್ಲ

ಭಾರತದ ಗಾನ ಕೋಗಿಲೆ ಎಸ್.ಜಾನಕಿ (88) ಅವರು ಮೈಸೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ವಯೋಸಹಜ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಜನವರಿಯಲ್ಲಿ ಅವರ ಮಗ ಮುರಳಿ ಕೃಷ್ಣ ಅವರ ನಿಧನರಾದ ಬಳಿಕ ಜಾನಕಿಯವರು ಬಹಳಷ್ಟು ಕುಗ್ಗಿ ಹೋಗಿದ್ದರು.

ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಲ್ಲಿ ಒಂದಾದ ಪದ್ಮಭೂಷಣ ಪಡೆದಿದ್ದ ಮೇರು ಗಾಯಕಿ ಎಸ್ ಜಾನಕಿ ಕನ್ನಡದಲ್ಲಿ, ಅದರಲ್ಲೂ ಮುಖ್ಯವಾಗಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ ನಾಗ್, ಅನಂತ್‌ ನಾಗ್, ಅಂಬರೀಷ್, ಶಿವರಾಜ್‌ಕುಮಾರ್ ಸೇರಿದಂತೆ ಬಹಳಷ್ಟು ನಟನಟಿಯರ ಸಿನಿಮಾಗಳ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ  ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ ಎಸ್‌. ಜಾನಕಿ ಬಾಲ್ಯದಿಂದಲೇ ಸಂಗೀತದತ್ತ ಆಸಕ್ತಿ ಹೊಂದಿದ್ದರು. 19ನೇ ವಯಸ್ಸಿನಲ್ಲಿ 1957ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ‘ವಿಧಿಯಿನ್ ವಿಲಾಯಟ್ಟು’ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ವಿವಿಧ ರಾಜ್ಯ ಪ್ರಶಸ್ತಿಗಳು ಸೇರಿದಂತೆ ಬಹಳಷ್ಟು ಸಂಘಸಂಸ್ಥೆಗಳ ಪ್ರಶಸ್ತಿಗೆ ಭಾಜನರಾಗಿದ್ದರು.

ಸಿಎಂ ಡಿಕೆ ಶಿವಕುಮಾರ್‌ ಸಂತಾಪ

ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಅನೇಕ ಗಾಯಕರನ್ನು ಪ್ರೋತ್ಸಾಹಿಸಿ  ಬೆಳೆಸಿದ, ಸರಳತೆಯ ಸಾಕಾರಮೂರ್ತಿ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬವರ್ಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿಎಂ ಪೋಸ್ಟ್‌ ಮಾಡಿದ್ದಾರೆ.

 

Related Posts

Leave a Reply

Your email address will not be published. Required fields are marked *