ಜಾನುವಾರುಗಳ ಮೇವಿಗಾಗಿ ಮೆಕ್ಕೆಜೋಳ ಸೊಪ್ಪು ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ವಿಜಯನಗರದ ಕೂಡ್ಲಿಗಿಯ ಚೌಡಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ಓಬಮ್ಮ (53) ಮೃತಪಟ್ಟ ಮಹಿಳೆ. ಸಿಟ್ಟಿಗೆದ್ದ ಸ್ಥಳೀಯರು ಮಹಿಳೆಗೆ ಕಚ್ಚಿ ಸಾಯಿಸಿದ ಜೋಡಿ ನಾಗರಹಾವುಗಳನ್ನು ಹೊಡೆದು ಕೊಂದಿದ್ದಾರೆ. ಸೊಪ್ಪು ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವುಗಳು ಮಹಿಳೆಯ ಬಲಗೈಗೆ ಒಂದರ ಹಿಂದೆ ಒಂದರಂತೆ ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದರು. ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಸು ನೀಗಿದ್ದಾರೆ.
ಹಾವು ಕಚ್ಚಿ ಮೃತಪಟ್ಟ ಮಹಿಳೆ ಕುಟುಂಬದವರನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ನಾಂದೇಡ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಾವು ಕಚ್ಚಿದ್ದು, ಆಕೆ ಆ ಹಾವಿನ ತಲೆಯನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಹೋಗಿದ್ದ ಘಟನೆ ನಡೆದಿತ್ತು.
ಆಕೆ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದಾಗ, ನರ್ಸ್, ವೈದ್ಯರು, ಸಿಬ್ಬಂದಿ ಆಸ್ಪತ್ರೆಯಿಂದ ಹೊರಗೆ ಓಡಿದ್ದಾರೆ. ಲೋಹಾ ತಾಲೂಕಿನ ಗಾಲೇಗಾಂವ್ ಗ್ರಾಮದಲ್ಲಿ ಕಾರ್ಮಿಕರ ಜೊತೆ 60 ವರ್ಷದ ಸುಶೀಲಾ ವಾಘಮಾರೆ ಕೆಲಸ ಮಾಡುತ್ತಿದ್ದಾಗ ಹಾವು ದಾಳಿ ಮಾಡಿತ್ತು.
ಸುಶೀಲಾ ವಾಘಮೊರೆಗೆ ಕಚ್ಚಿದ ಹಾವು ವಿಷಕಾರಿ ಹಾವಲ್ಲ. ಹೀಗಾಗಿ ಅಪಾಯದಿಂದ ಪಾರಾಗಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದರು.


