ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮೂರು ಅಂತಸ್ತಿನ ಕಟ್ಟಡದ ಮೇಲೆ ಕಸದ ದಿಬ್ಬ ಕುಸಿದು ಕನಿಷ್ಠ 16 ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಂಪ್ರಿ ಚಿಂಚ್‌ವಾಡ್‌ನ ಮೋಶಿಯಲ್ಲಿ ಈ ದುರಂತ ನಡೆದಿದ್ದು, ಅಲ್ಲಿ ಕಾರ್ಪೋರೇಶನ್ ಸಂಸ್ಥೆಯ ಪರವಾಗಿ ತ್ಯಾಜ್ಯವನ್ನು ಸಂಸ್ಕರಿಸುವ ಖಾಸಗಿ ಕಂಪನಿಯ ಆಡಳಿತ ಕಚೇರಿಯಾಗಿ ಕಟ್ಟಡವನ್ನು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಆಡಳಿತ ಕಟ್ಟಡವು ಪರ್ವತದಂತಹ ಎತ್ತರದ ತ್ಯಾಜ್ಯದ ರಾಶಿಯ ಪಕ್ಕದಲ್ಲಿದೆ. ಮಳೆಗೆ ತ್ಯಾಜ್ಯ ದಿಬ್ಬವು ಸಡಿಲಗೊಂಡು ಕಟ್ಟಡದ ಮೇಲೆ ಕುಸಿದಿದೆ ಎಂದು ತೋರುತ್ತದೆ ಎಂದು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತ ವಿಜಯ್ ಸೂರ್ಯವಂಶಿ ಹೇಳಿದ್ದಾರೆ.
ಖಾಸಗಿ ಕಂಪನಿಯ 16 ಉದ್ಯೋಗಿಗಳು ಕಟ್ಟಡದೊಳಗೆ ಇದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳ ತಂಡಗಳು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.


