ಕೇರಳದ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 18 ಮಂದಿ ಭೂಕುಸಿತಕ್ಕೆ ಸಿಲುಕಿರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಿದೆ.
ಮೆಪ್ಪಾಡಿಯ ಮೀನಾಕ್ಷಿ ಸೇತುವೆ ಸಮೀಪ, ವಯನಾಡ್ ಟನಲ್ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೂಕುಸಿತ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ ಈ ಭಾಗದಲ್ಲಿ 265 ಮಿಮೀ ಮಳೆಯಾಗಿರುವುದರಿಂದ ಸುರಂಗ ರಸ್ತೆಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಕುಸಿದುಮಣ್ಣು ಜಾರಿಬಿದ್ದಿದೆ. ಕಾಮಗಾರಿ ಪ್ರದೇಶವೇ ಮಣ್ಣಿನಡಿ ಹೂತು ಹೋಗಿದೆ.
ಮಳೆಯ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಭೂಕುಸಿತ ಸಂಭವಿಸಿದಾಗ ಸಮೀಪದಲ್ಲಿ ಕೆಲವು ಕಾರ್ಮಿಕರು ಹಾಗೂ ಸಾರ್ವಜನಿಕರು ಇದ್ದರು, ಅವರು ವಿಪತ್ತಿಗೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ ನಡೆಸಿ ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಕಂದಾಯ ಸಚಿವ ಎ.ಪಿ. ಅನಿಲ್‌ಕುಮಾರ್ ಅವರೊಂದಿಗೆ ಪರಿಸ್ಥಿತಿ ಪರಿಶೀಲಿಸಿದರು. ವಯನಾಡಿಗೆ ತೆರಳಿ ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ. ಮೀನಂಗಡಿಯ ಎನ್‌ಡಿಆರ್‌ಎಫ್ ಘಟಕದೊಂದಿಗೆ ಕೋಝಿಕ್ಕೋಡ್‌ನಿಂದಲೂ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಆದೇಶಿಸಲಾಗಿದೆ.
ಮಣ್ಣು ಇನ್ನೂ ಕುಸಿಯುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಕೆಲವು ದಿನ ಮಳೆ ಮುಂದುವರಿಯುವ ಮುನ್ಸೂಚನೆಯಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
ಕೇರಳ, ಕರಾವಳಿ ಕರ್ನಾಟಕ, ಆಂಧ್ರಪ್ರದೇಶದ ಕರಾವಳಿ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


