ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಲಮಾಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರು ಜೀವಬೆದರಿಕೆ ಆರೋಪ ಮಾಡಿದ್ದಾರೆ.
ಪ್ರಕರಣ ಕೆದಕಿದರೆ ನಿಮ್ಮ ದೊಡ್ಡ ಮಗ ಕೂಡ ಬೀದಿ ಹೆಣವಾಗ್ತಾನೆ ಎಂದು ಶಾಸಕ ಚಂದ್ರು ಲಮಾಣಿ ಬೆದರಿಕೆ ಹಾಕಿದ್ದಾರೆ. ಪಿಎಸ್ಐನಿಂದಲೂ ನಮಗೆ ಜೀವ ಬೆದರಿಕೆ ಇದೆ. ಮರಣೋತ್ತರ ಪರೀಕ್ಷೆ ವರದಿ ಕೊಡಲು ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪಿಎಸ್ಐ ಒಂದು ವರ್ಷ ಅಲೆದಾಡಿಸಿದ್ದಾರೆ ಎಂದು ಸುನೀಲ್ ಪೋಷಕರು ದೂರಿದ್ದಾರೆ.
ಶಾಸಕರ ಅವ್ಯವಹಾರ ಚಾಲಕನಿಗೆ ಗೊತ್ತಿತ್ತು, ಮಾಡಿರುವ ಕೆಲಸಕ್ಕೆ ವೇತನ ಕೂಡ ಸರಿಯಾಗಿ ನೀಡುತ್ತಿರಲಿಲ್ಲ, ಸುನೀಲ್ ಸಾವಿನ ಬಗ್ಗೆ ಅನುಮಾನವಿದ್ದು, ನಮಗೆ ನ್ಯಾಯ ಸಿಗಬೇಕು ಎಂದು ಮೃತನ ಸಹೋದರ, ತಂದೆ ಮತ್ತು ತಾಯಿ ಆಗ್ರಹಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಸುನೀಲ್ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು, ನಿಖರ ಕಾರಣ ತಿಳಿದುಬಂದಿರಲಿಲ್ಲ. ಶಾಸಕ ಚಂದ್ರು ಲಮಾಣಿ ನಿವಾಸದಲ್ಲೇ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಸುನೀಲ್ ಲಮಾಣಿ ಆತ್ಮಹತ್ಯೆ ಬಗ್ಗೆ ಕುಟುಂಬಸ್ಥರು ಅಂದೇ ಅನುಮಾನ ವ್ಯಕ್ತಪಡಿಸಿದ್ದರು. ಕುಟುಂಬಸ್ಥರು ಬರುವ ತನಕ ಪೊಲೀಸರು ಕಾಯದೆ ಅವಸರದಲ್ಲಿ ಶವ ತೆಗೆದಿದ್ದಾರೆ. ಸುನೀಲ್ ಕತ್ತಿನಲ್ಲಿ ರಕ್ತ ಕಾಣಿಸಿದೆ. ಯಾರಾದರೂ ಕೊಲೆ ಮಾಡಿರುವ ಅನುಮಾನ ಇದೆ. ಆತ್ಮಹತ್ಯೆ ಮಾಡಿಕೊಂಡರೆ ನಾಲಿಗೆ ಹೊರ ಬರಬೇಕಿತ್ತು, ಉರುಳು ಹಾಕಿಕೊಂಡ ಹಗ್ಗದ ಗುರುತು ಕತ್ತಿನಲ್ಲಿ ಇರಬೇಕಿತ್ತು. ಆದರೆ ರಕ್ತ ಬಂದಿದೆ, ಹೀಗಾಗಿ ಸಾವಿನಲ್ಲಿ ಅನುಮಾನ ಇದೆ ಎಂದ ಕುಟುಂಬಸ್ಥರು ಹೇಳಿದ್ದರು.


