ಹರಾಜಿನ ಮೂಲಕ ಜಾಗ ಪಡೆದು ವರ್ಷಗಟ್ಟಲೆ ಗಣಿಗಾರಿಕೆ ಆರಂಭಿಸದೆ ಜಾಗ ಇಟ್ಟುಕೊಂಡು ಕುಳಿತವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ಗಣಿಗಾರಿಕೆಗೆ ಭೂಮಿ ಪಡೆದವರು ಎಷ್ಟು ಮಂದಿ ಇದ್ದಾರೆ ? ಲೀಸ್ ಪಡೆದ ಪ್ರಕರಣಗಳ ಸ್ಥಿತಿ ಗತಿ ಏನಿದೆ? ಗಣಿಗಾರಿಕೆ ಆರಂಭಿಸದಿರುವವರ ಪಟ್ಟಿ, ಅದಕ್ಕೆ ಕಾರಣಗಳೇನು, ಅರಣ್ಯ ಅನುಮತಿ ಬಾಕಿ ಇರುವ ಪ್ರಕರಣಗಳೆಷ್ಟು, ಬಾಕಿ ಉಳಿಯಲು ಕಾರಣಗಳೇನು ಎನ್ನುವುದೂ ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಗಣಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂದೂರಿ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ರಾಜ್ಯದ ಗಣಿ ನೀತಿ ಮತ್ತು ಇತರೆ ರಾಜ್ಯಗಳಲ್ಲಿ ಇರುವ ಗಣಿ ನೀತಿ, ನಿಯಮ ಮತ್ತು ಕಾನೂನುಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ, “ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ.ಅತೀಕ್ ಮತ್ತು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ವಹಿಸಿದರು.
ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ೨೦೨೫–೨೬ನೇ ಸಾಲಿನಲ್ಲಿ ೮,೮೪೫.೩೯ ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ನಿಗದಿತ ಗುರಿಯ ಶೇ. ೯೮ ಸಾಧಿಸಲಾಗಿದೆ. ೨೦೨೬–೨೭ನೇ ಸಾಲಿನಲ್ಲಿ ಇದುವರೆಗೆ ೧,೧೬೪.೧೧ ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಅಕ್ರಮ ಮತ್ತು ನಿಯಮಬಾಹಿರ ಗಣಿಗಾರಿಕೆ ನಡೆಸಿದ ೬೩೦೧ ಪ್ರಕರಣಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. ೩೧೨೬ ಲಕ್ಷ ದಂಡ ಸಂಗ್ರಹಿಸಿ, ೨೬೮ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ ೩೬೪೮ ಮರಳು ಗಣಿಗಾರಿಕೆ ಪ್ರಕರಣಗಳೂ ಸೇರಿವೆ ಎಂದು ವರದಿ ಒಪ್ಪಿಸಿದರು.
ಹಿಂದಿನ ಅವಧಿಗೆ ಅಥವಾ ಪೂರ್ವಾನ್ವಯವಾಗುವ ತೆರಿಗೆಯಿಂದ ಸರ್ಕಾರಕ್ಕೆ ಬರಬೇಕಾದ ಆದಾಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಗಣಿ ನಿಯಮಗಳು ಮತ್ತು ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಮೀರದಂತೆ ಕ್ರಮ ವಹಿಸುವಂತೆ ಸೂಚಿಸಿ ಈ ಕೆಳಗಿನ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.
ಪೂರ್ವಾನ್ವಯವಾದರೆ ಆದಾಯದ ಪರಿಣಾಮಗಳು, ಹಿಂದಿನ ದಿನಾಂಕದಿಂದ ಜಾರಿಗೆ ಬಂದಲ್ಲಿ ಉಂಟಾಗುವ ಆದಾಯದ ಪರಿಣಾಮಗಳು, ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ ಉಂಟಾಗುವ ಕಂದಾಯದ ಪರಿಣಾಮಗಳು, ಈ ಪ್ರಸ್ತಾವನೆಯು ಪೂರ್ವಾನ್ವಯವಾಗಿ ಜಾರಿಯಾದರೆ ಸರ್ಕಾರದ ಆದಾಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ. ಪೂರ್ವಾನ್ವಯ ಆದಾಯದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿ.ಹಿಂದಿನ ಅವಧಿಗೆ ಅನ್ವಯವಾಗುವ ಕಂದಾಯದ ಪರಿಣಾಮಗಳನ್ನು ಪರಿಶೀಲಿಸಿ. ಎಂದು ಸೂಚನೆ ನೀಡಿದರು.


