Menu

ಮಳೆ ಕೊರತೆ: ಪ್ರತಿ ಜಿಲ್ಲೆಗೆ ಐದು ಕೋಟಿ ರೂ. ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ

ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ಪ್ರತಿ ಜಿಲ್ಲೆಗೆ ೫ ಕೋಟಿ ರೂ.  ಕೋಟಿ ಕುಡಿಯುವ ನೀರಿನ ಪರಿಹಾರ ನಿಧಿ ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ಹೇಳಿದ್ದಾರೆ.

ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಸಚಿವರು, ಪ್ರಾದೇಶಿಕ ವ್ಯಾಪ್ತಿಯ ಏಳು ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಕುರಿತು  ಪರಿಶೀಲನೆ ನಡೆಸಲಾಗಿದೆ.   ಮೊದಲ ಬಾರಿಗೆ ಎಲ್ಲಾ ಏಳು ಜಿಲ್ಲೆಗಳ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಜಂಟಿ ಸಭೆ ನಡೆಸಿ ಮಳೆ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಬೆಳೆ ನಾಶ ಹಾಗೂ ಬಿತ್ತನೆ ಕಾರ್ಯದ ಪ್ರಗತಿ ಕುರಿತು ಸಮಗ್ರ ಆಡಳಿತಾತ್ಮಕ ಪರಾಮರ್ಶೆ ನಡೆಸಲಾಗಿದೆ ಎಂದು  ವಿವರಿಸಿದರು.

ಜೂನ್ ತಿಂಗಳಿನಲ್ಲಿ ಕೇವಲ ಶೇ. 30 ಮಾತ್ರ ಮಳೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ.  ಪರಿಸ್ಥಿತಿ ನಿಭಾಯಿಸಲು ಈಗಾಗಲೇ ತುರ್ತು ‘ಕ್ರಿಯಾ ಯೋಜನೆ’ ರೂಪಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ಜಿಲ್ಲೆಗೆ ತಲಾ 5 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಯಾರದ್ದೇ ಪ್ರಭಾವ ಅಥವಾ ಲಾಬಿಗೆ ಮಣಿದು ಜಲಾಶಯಗಳಿಂದ ಅನಗತ್ಯವಾಗಿ ನೀರು ಬಿಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ‘ಮೋಡ ಬಿತ್ತನೆ’ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.  ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎನ್.ಡಿ.ಆರ್.ಎಫ್ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿಂದೆ ನಾವು ನೀಡಿದ ವಸ್ತುಸ್ಥಿತಿ ವರದಿಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಂದಾಯ ಇಲಾಖೆಯ ಭೂಮಿಗೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ‘ಪೌತಿ ಹಕ್ಕು’ (ವಾರಸುದಾರರ ಹೆಸರು ದಾಖಲಿಸುವಿಕೆ) ಪ್ರಕ್ರಿಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಜಮೀನುಗಳ ಒತ್ತುವರಿ ಕುರಿತು ಪ್ರಸ್ತಾಪಿಸಿ, ರಾಜ್ಯದಲ್ಲಿ ಎ, ಬಿ, ಮತ್ತು ಸಿ ವರ್ಗದ ದೇವಸ್ಥಾನಗಳಿವೆ. ಇವುಗಳಲ್ಲಿ ಧಾರ್ಮಿಕ ಇಲಾಖೆಯ ಜಮೀನುಗಳು ಎಲ್ಲೆಲ್ಲಿ ಒತ್ತುವರಿಯಾಗಿದೆಯೋ, ಅವುಗಳನ್ನು ತಕ್ಷಣವೇ ತೆರವುಗೊಳಿಸಲು ಆದೇಶಿಸಲಾಗಿದೆ. ಪ್ರಾಧಿಕಾರ ಹೊಂದಿರದ ದೇವಸ್ಥಾನಗಳ ಆಡಳಿತ ಮಂಡಳಿಯವರು ಯಾವುದೇ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತರಬೇಕು. ದೇವಸ್ಥಾನಗಳ ಹುಂಡಿ ಹಣ ಹಾಗೂ ಆದಾಯ ಪೋಲಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶಾಲಾ-ಕಾಲೇಜು ಮಟ್ಟದಲ್ಲಿ ಗುಣಮಟ್ಟದ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಿಇಟಿ ಮೂಲಕ ನಡೆಯುವ ಈ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಕ್ರೀಡಾ ಮೀಸಲಾತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಪ್ರಕಟಿಸಿದರು.

ಈ ಎಲ್ಲಾ ಸಮಗ್ರ ಯೋಜನೆಗಳನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲು ವ್ಯವಸ್ಥಿತ ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ ಎಂದರು.

Related Posts

Leave a Reply

Your email address will not be published. Required fields are marked *