Menu

ಕೆಆರ್‌ಪುರದಲ್ಲಿ ತಂದೆ, ತಾಯಿ, ತಂಗಿಯ ಹತ್ಯೆ: ಪಾಂಡಿಚೆರಿಯಲ್ಲಿ ಯುವತಿ ಅರೆಸ್ಟ್‌

ಬೆಂಗಳೂರಿನ ಕೆ.ಆರ್. ಪುರದಲ್ಲಿ ತಂದೆ, ತಾಯಿ, ತಂಗಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ವೈಟ್‌ಫೀಲ್ಡ್ ವಿಭಾಗದ ವಿಶೇಷ ಪೊಲೀಸ್ ತಂಡ ಬಂಧಿಸಿದ್ದು, ತಾಯಿಯ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ ಕೆನೆತ್‌ಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ನನ್ನ ತಾಯಿ ನನ್ನ ಇಡೀ ಜೀವನವನ್ನು ನಿಯಂತ್ರಿಸುತ್ತಿದ್ದರು, ನನಗೆ ಯಾವುದೇ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ನಾನು ಏನು ಮಾಡಿದರೂ ತಪ್ಪು, ಎಲ್ಲಿಗೆ ಹೋದರೂ ತಪ್ಪು ಎನ್ನುತ್ತಿದ್ದರು. ಮನೆಯಲ್ಲಿ ಕುಳಿತರೂ, ನಿಂತರೂ, ಮಲಗಿದರೂ ತಪ್ಪು ಹುಡುಕುತ್ತಿದ್ದರು. ಅವರ ಈ ವರ್ತನೆಯಿಂದಾಗಿ ನಾನು ಎಲ್ಲರೂ ಇದ್ದೂ ಅನಾಥಳಂತೆ ಬದುಕಬೇಕಾಯಿತು. ನನ್ನ ಜೀವನದ ನೆಮ್ಮದಿಯನ್ನೇ ಅವರು ಹಾಳು ಮಾಡಿದ್ದರು. ನನ್ನ ಬದುಕನ್ನು ಹಾಳು ಮಾಡಿದ ಕಾರಣಕ್ಕೇ ನಾನು ಅವರನ್ನು ಕೊಂದೆ ಎಂದು ಆರೋಪಿ ಶ್ವೇತಾ ಪೊಲೀಸ್‌ ವಿಚಾರಣೆ ವೇಳೆ ತಿಳಿಸಿದ್ದಾಳೆ.

https://udayakala.news/young-woman-kills-father-mother-and-younger-sister-for-not-wanting-to-be-in-a-live-in-relationship/

ತಾಯಿ ತನ್ನ ಫ್ಲಾಟ್‌ಗೆ ಬಂದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ತಾನು ತಾಯಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಕೊಲೆ ನಡೆಯುವಾಗ ಪ್ರಿಯಕರ ಕೆನತ್ ರೂಮ್ ಒಳಗೆ ಬಾಗಿಲು ಹಾಕಿಕೊಂಡು ಹೆಡ್‌ಫೋನ್ ಧರಿಸಿ ಕುಳಿತಿದ್ದ ಎನ್ನಲಾಗಿದೆ. ಕೊಲೆ ನಡೆದ ನಂತರ ಹೊರಗೆ ಬಂದಿದ್ದಾನೆ. ಮೃತದೇಹವನ್ನು ಎಳೆದುಕೊಂಡು ಹೋಗಿ ಶೌಚಾಲಯದ ಒಳಗೆ ಹಾಕಲು ಮತ್ತು ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಕ್ಲೀನ್ ಮಾಡಲು ಕೆನತ್ ಸಹಕರಿಸಿದ್ದಾಗಿ ಶ್ವೇತಾ ತಿಳಿಸಿದ್ದಾಳೆ.

ತಂದೆ ಮರಣಪೂರ್ವ ನೀಡಿದ ಹೇಳಿಕೆ
ನನ್ನ ಪತ್ನಿ ಲಕ್ಷ್ಮಿ ಮಗಳ (ಶ್ವೇತಾ) ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಳು. ಆಕೆ ಫೋನ್ ಸ್ವೀಕರಿಸದಿದ್ದಾಗ ಗಾಬರಿಗೊಂಡು ನಾನು ಮತ್ತು ನನ್ನ ಕಿರಿಯ ಮಗಳು ಸುಪ್ರಿಯಾ ಫ್ಲಾಟ್‌ಗೆ ಹೋದೆವು. ಬಾಗಿಲು ತೆರೆದಾಗ ಮಗಳು ಮತ್ತು ಕೆನತ್ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಒರೆಸುತ್ತಿದ್ದರು. ಏನಾಯಿತು ಎಂದು ನಾವು ಆತಂಕದಿಂದ ಕೇಳಿದೆ. ಹಿಂದಿನಿಂದ ಬಂದ ಶ್ವೇತಾ ತನ್ನ ತಂಗಿ ಸುಪ್ರಿಯಾಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಏನೂ ಆಗಿಲ್ಲ, ಸುಮ್ಮನೆ ಒಳಗೆ ಬನ್ನಿ ಎಂದು ಕೂಗಾಡಿದಳು. ಮಗಳನ್ನು ಬಿಡಿಸಲು ಹೋದಾಗ ಕೆನತ್ ನನ್ನ ಮೇಲೆ ಚಾಕುವಿನಿಂದ ಇರಿದ, ನಾನು ತಪ್ಪಿಸಿಕೊಂಡು ಕೆಳಗೆ ಓಡಿ ಬಂದೆ. ಕೆಳಗಿದ್ದವರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಶ್ವೇತಾ ತಂದೆ ಆಸ್ಪತ್ರೆಯಲ್ಲಿ ಸಾವಿಗೂ ಮೊದಲು ಹೇಳಿಕೆ ನೀಡಿದ್ದರು.

ತಂದೆ ಸೋಮಸುಂದರಂ ಕೆಳಗೆ ಬಂದ ನಂತರ ಆರೋಪಿಗಳು ಕಿರಿಯ ಮಗಳು ಸುಪ್ರಿಯಾಳಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ನಂತರ ಆರೋಪಿಗಳು ಅಪಾರ್ಟ್‌ಮೆಂಟ್‌ನ ಟೆರಸ್ ಮೇಲೆ ಹೋಗಿ, ಕ್ಕದ ಕಟ್ಟಡಕ್ಕೆ ಜಿಗಿದು ಪರಾರಿಯಾಗಿದ್ದರು.

ಸ್ವಲ್ಪ ದೂರದವರೆಗೆ ಒಟ್ಟಿಗೆ ಹೋಗಿದ್ದ ಶ್ವೇತಾ ಮತ್ತು ಕೆನತ್, ಪೊಲೀಸರ ಕಣ್ಣು ತಪ್ಪಿಸಲು ನಂತರ ಬೇರೆಯಾಗಿದ್ದರು. ಪ್ರಮುಖ ಆರೋಪಿ ಕೆನತ್ ಸಿಕ್ಕ ಬಳಿಕ ಈ ತ್ರಿವಳಿ ಕೊಲೆಯ ಸಂಪೂರ್ಣ ವಿವರ ಹೊರಬರಲಿದೆ. ಶ್ವೇತಾ ಹಾಗೂ ಕೆನತ್ ಕಳೆದ ಭಟ್ರಹಳ್ಳಿಯ ವೈಟ್ ಪರ್ಲ್ ಸಿಟಿ ಲೇಔಟ್‌ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್‌ಮೆಂಟ್’ನಲ್ಲಿ ಲಿವ್‌-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಇದಕ್ಕೆ ಪೋಷಕರ ತೀವ್ರ ವಿರೋಧವಿತ್ತು.

ಶ್ವೇತಾ ಕೆನತ್ ಜೊತೆ ಸೇರಿ 30 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದಳು. ಶ್ವೇತಾ ಹೆಸರಿನಲ್ಲಿದ್ದ ಸಾಲದ ನೋಟಿಸ್ ಮಾರತ್‌ಹಳ್ಳಿಯಲ್ಲಿದ್ದ ತಂದೆ-ತಾಯಿಯ ಮನೆಗೆ ತಲುಪಿತ್ತು. ಯಾಕೆ ಇಷ್ಟೊಂದು ಸಾಲ ಮಾಡಿದ್ದಿ ಎಂದು ಪ್ರಶ್ನಿಸಿದ್ದೇ ಇವರಿಬ್ಬರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಲದ ನೋಟಿಸ್ ವಿಷಯವಾಗಿ ಮಾತನಾಡಲು ಶ್ವೇತಾ ತಾಯಿಯನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದಳು. ಅಪಾರ್ಟ್‌ಮೆಂಟ್ ಸೆಕ್ಯುರಿಟಿಗೆ ಮೊದಲೇ ಈ ಬಗ್ಗೆ ಮಾಹಿತಿ ನೀಡಿದ್ದಳು. ಸಾಲದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಶ್ವೇತಾ ತಾಯಿಯನ್ನು ಮಚ್ಚಿನಿಂದ ಕೊಂದು ಸಾಕ್ಷ್ಯ ನಾಶಪಡಿಸಲು ಬಾತ್ ರೂಮ್‌ನಲ್ಲಿ ರಕ್ತದ ಕಲೆಗಳನ್ನು ತೊಳೆದಿದ್ದಾಳೆ.

Related Posts

Leave a Reply

Your email address will not be published. Required fields are marked *