ಯಾವುದೇ ಸಮಸ್ಯೆಯನ್ನು ಬುದ್ಧಿಪೂರ್ವಕವಾಗಿ ಬಗೆಹರಿಸುವಂತಹ ಶಕ್ತಿ, ಸಾಮರ್ಥ್ಯ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೀಗ ತಮ್ಮ ಜಾಣ ನಡೆ ಮೂಲಕ ಮೇಕೆದಾಟು ಯೋಜನೆ ಒಟ್ಟಾರೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.
ಕಾವೇರಿ ಕಣಿವೆಯ ಮೇಕೆದಾಟು ಯೋಜನೆಗೆ, ಕರ್ನಾಟಕ, ತಮಿಳುನಾಡು ರಾಜ್ಯಗಳು ಟೊಂಕ ಕಟ್ಟಬೇಕಿದೆ. ತಮಿಳುನಾಡು ನೂತನ ಮುಖ್ಯಮಂತ್ರಿ ಜೋಸೆಪ್ ವಿಜಯ್, ಅಣೆಕಟ್ಟು ನಿರ್ಮಾಣ ಸಂಬಂಧ, ಹೊಸ ನ್ಯಾಯಾಧಿಕರಣ ರಚನೆಗೆ ಕೇಂದ್ರವನ್ನು ಒತ್ತಾಯಿಸುವುದು ಬೇಡ ಎಂದಿದ್ದಾರೆ. ಇದನ್ನು ನೇರವಾಗಿ ಸುಪ್ರೀಂಕೋರ್ಟ್ ಅಂಗಣಕ್ಕೆ ತೆಗೆದುಕೊಂಡು ಹೋಗುವ ಕಾನೂನಿನ ವ್ಯೂಹವೂ ತಮಿಳುನಾಡು ಸರ್ಕಾರದ್ದು ಇರಬಹುದು. ಅದೇನೆ ಇರಲಿ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಾಳುವ ನಿಲುವು ಮತ್ತು ನಿರ್ಣಯಗಳೂ ಅತಿ ಮುಖ್ಯ. ಕೋರ್ಟ್ ಮತ್ತು ನ್ಯಾಯಾಧಿಕರಣದ ಮುಂದೆ ಕಾವೇರಿ ಕಣಿವೆಯ ಹಲವಾರು ವ್ಯಾಜ್ಯಗಳು ವರ್ಷಗಳಿಂದಲೂ ವಿಲೇವಾರಿಯಾಗದೆ ನನೆಗುದಿಗೆ ಬಿದ್ದಿದೆ. ದಶಕಗಳಿಂದಲೂ ನನೆಗುದಿಗೆ ಬಿದ್ದ ಜಲವಿವಾದಗಳಿಗೆ ತಾರ್ಕಿಕ ಅಂತ್ಯ ನೀಡುವ ಮನಃಸಂಕಲ್ಪ ಉಭಯ ರಾಜ್ಯಗಳಿಗೂ ಇರಬೇಕು. ಇದು ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯವಾಗುವಂತಹ ಸಂಗತಿ.
ಈ ದಿಶೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಕಾಂಗ್ರೆಸ್ ಮಿತ್ರ ಪಕ್ಷವೇ ಈಗ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಈ ಸಂಬಂಧ ವಿವಾದವನ್ನು ಮತ್ತಷ್ಟು ಜಟಿಲಗೊಳಿಸದೆ ಬಗೆಹರಿಸಲು ಬೇಕಿರುವ ಮಾರ್ಗೋಪಾಯವನ್ನು ಉಭಯ ರಾಜ್ಯಗಳು ಆಲೋಚಿಸಬೇಕಷ್ಟೆ. ಕಾವೇರಿ ಕಣಿವೆಯ ಪ್ರಮುಖ ನೀರಾವರಿ ಯೋಜನೆ ವಿಚಾರದಲ್ಲಿ ಜೆ ಎಚ್ ಪಟೇಲ್ ಅವರು ಹೊಗೆನಕಲ್ ಡ್ಯಾಂ ನಿರ್ಮಾಣಕ್ಕೆ ಅನುಮತಿ ನೀಡುವ ಮುನ್ನ ತಮ್ಮದೇ ಆದ ವಿವೇಚನೆಯನ್ನು ಬಳಸಿದ್ದರು. ಇದು ತಮಿಳುನಾಡಿನಲ್ಲಿ ಯೋಜನೆ ಸಾಕಾರಗೊಳ್ಳಲು ಅತಿ ದೊಡ್ಡ ಮಟ್ಟದಲ್ಲಿ ನೆರವಾಗಿದ್ದು ನಿಜ. ಈಗ ರಾಜ್ಯದ ಮುಖ್ಯಮಂತ್ರಿ ಶಿವಕುಮಾರ್ ಕೂಡಾ ಪಕ್ಷದ ಹೈಕಮಾಂಡ್ ಮೂಲಕ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ನೀಡುವ ಜಾಣ ರಾಜಕೀಯ ನಡೆಯನ್ನು ಕಂಡುಕೊಳ್ಳಬೇಕಿದೆ.
ತಮಿಳುನಾಡುವಿನ ಅಸೆಂಬ್ಲಿಯಲ್ಲಿ ಮೇಕೆದಾಟುವಿನ ಯೋಜನೆಗೆ ವಿರುದ್ಧವಾಗಿ ಮತ್ತು ಕರ್ನಾಟಕದ ವಿಧಾನಸಭೆಯಲ್ಲಿ ಯೋಜನೆ ಪರವಾಗಿ ನಿರ್ಣಯ ಮಂಡನೆಯಾಗುವುದು ಸರ್ವೇ ಸಾಮಾನ್ಯ. ಇಂತಹ ಹತ್ತಾರು ನಿರ್ಣಯಗಳು ಅಂಗೀಕಾರವಾಗಿರುವುದು ಬೇರೆ ಮಾತು. ಇದರ ಆಚೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಾದ ವಿಜಯ್ ಮತ್ತು ಶಿವಕುಮಾರ್ ವಾಸ್ತವಿಕ ನೆಲೆಗಟ್ಟಿನ ಮೇಲೆ ಆಲೋಚಿಸಿದರೆ ಬಿಕ್ಕಟ್ಟು ಬಗೆಹರಿಯುವುದು ಕಷ್ಟವೇನಲ್ಲ.
ಸುಪ್ರೀಂಕೋರ್ಟ್ ಮತ್ತು ನ್ಯಾಯಾಧಿಕರಣದ ಸುತ್ತಲೂ ಗಿರಕಿ ಹಾಕಿ ಕರ್ನಾಟಕವು ಈವರೆಗೆ ಕೋಟ್ಯಂತರ ರೂಪಾಯಿಗಳನ್ನು ಕೋರ್ಟ್ ಮತ್ತು ವಕೀಲರಿಗೆ ಸುರಿದಿದ್ದಾಯಿತು. ಆದರೆ ವಿವಾದ ಮಾತ್ರ ಒಂದು ಮಿಲಿಮೀಟರ್ ಮುಂದೆ ಸರಿಯಲಿಲ್ಲ. ಈ ಪರಮಸತ್ಯವು ರಾಜ್ಯದ ಮುಖ್ಯಮಂತ್ರಿಗೆ ತಿಳಿಯದ ಸಂಗತಿಯೇನಲ್ಲ. ಯಾವುದೇ ಸಮಸ್ಯೆಯನ್ನು ಬುದ್ದಿಪೂರ್ವಕವಾಗಿ ಬಗೆಹರಿಸುವಂತಹ ಶಕ್ತಿ, ಸಾಮರ್ಥ್ಯವಿರುವ ಶಿವಕುಮಾರ್ ಈ ದಿಶೆಯಲ್ಲಿ ಜಾಣ ನಡೆಯನ್ನು ಅನುಸರಿಸಿ ಮೇಕೆದಾಟು ಯೋಜನೆ ಒಟ್ಟಾರೆ ಸಾಕಾರಗೊಳ್ಳುವ ದಿಕ್ಕಿನತ್ತ ಸಾಗಬೇಕಿದೆ. ಜೆ.ಎಚ್. ಪಟೇಲ್ ಹೊಗೆನಕಲ್ ಯೋಜನೆಯನ್ನು ತಮ್ಮ ಸಹೃದಯದಿಂದ ಸಾಕಾರಗೊಳಿಸಿದರು. ಈಗ ಶಿವಕುಮಾರ್ ಮೇಕೆದಾಟು ಯೋಜನೆ ಸಾಕಾರಗೊಳ್ಳಲು ತಮ್ಮ ರಾಜಕೀಯ ಕೌಶಲ್ಯ ತೋರುವ ಅಗತ್ಯವಿದೆ.


