Menu

“ಬಿಎಸ್‌ವೈಗೆ ಅಧಿಕಾರ ನೀಡುತ್ತೇನೆಂದು ಶಿವಕುಮಾರ ಸ್ವಾಮೀಜಿ ಮೇಲೆ ಆಣೆ ಮಾಡಿದ್ದ ಕುಮಾರಸ್ವಾಮಿ”

ಹೆಚ್‌ಡಿ ಕುಮಾರಸ್ವಾಮಿಯವರು ಯಡಿಯೂರಪ್ಪಗೆ ಅಧಿಕಾರ ನೀಡುತ್ತೇನೆ ಎಂದು ಶಿವಕುಮಾರ ಸ್ವಾಮೀಜಿ ಮೇಲೆ ಆಣೆ ಮಾಡಿದವರು ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದರು. ಅವರಿಗೆ ಶಿವಕುಮಾರ್ ಸಿಎಂ ಆದ ಬಳಿಕ ನಿದ್ದೆ ಬರುತ್ತಿಲ್ಲ. ರಾತ್ರಿ ಶಿವಕುಮಾರ್ ಅವರದೇ ಯೋಚನೆಯಲ್ಲಿ ಇರುತ್ತಾರೆ. ಹೀಗಾಗಿ ದೆಹಲಿ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್‌ನಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಆಣೆ ಪ್ರಮಾಣದ ಬಗ್ಗೆ ಪ್ರತಿಕ್ರಿಯಿಸಿದರು. ಆಣೆ ಪ್ರಮಾಣ ಈ ಹಿಂದೆಯೂ ನಡೆದಿತ್ತು ಎಂದಬ ಮಾಧ್ಯಮದವರ ಹೇಳಿಕೆಗೆ, ಕುಮಾರಸ್ವಾಮಿ ಜೊತೆಗೆ ನಾನು ಬೆಳೆದವನು. ಅವರು ಬೇರೆ ಯಾರು ಸಿಎಂ ಆಗುವುದನ್ನು ಸಹಿಸುವುದಿಲ್ಲ. ಈ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಒಳ್ಳೆಯದಾಗುವುದಾದರೆ ನನ್ನಿಂದ ಮಾತ್ರ ಎಂಬ ಮನೋಭಾವವಿದೆ. ಅವರ ಭಾವನೆ, ರೀತಿ ನೀತಿ ಸರಿಯಾಗಿದ್ದರೆ ಇಷ್ಟು ಹೊತ್ತಿಗೆ 124 ಶಾಸಕರನ್ನು ಗೆಲ್ಲಿಸುತ್ತಿದ್ದರು. ಯಡಿಯೂರಪ್ಪಗೆ ಅಧಿಕಾರ ನೀಡುತ್ತೇನೆ ಎಂದು ಶಿವಕುಮಾರ ಸ್ವಾಮೀಜಿ ಮೇಲೆ ಆಣೆ ಮಾಡಿದವರು ಅಧಿಕಾರ ಹಸ್ತಾಂತರ ಮಾಡಲಿಲ್ಲ, ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದರು ಎಂದು ಹೇಳಿದರು.

ಅಡ್ಡಮತದಾನದ ಬಗ್ಗೆ ಧರ್ಮಸ್ಥಳದಲ್ಲಿ ಆಣೆಪ್ರಮಾಣ ಮಾಡುವ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ, ನಾವು ಈಗ ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು ಎಂದು ಕುಮಾರಸ್ವಾಮಿ ಹೇಳಿದ್ದಾರೋ ಇಲ್ಲವೋ ಎಂದು ಕುಮಾರಸ್ವಾಮಿ ಅವರಿಂದ ಧರ್ಮಸ್ಥಳದಲ್ಲಿ ಆಣೆ ಮಾಡಿಸಬೇಕಿದೆ. ಅಡ್ಡಮತದಾನಕ್ಕೆ ಅವರು ಇದನ್ನು ಮಾಡಿರುವಾಗ ಈ ವಿಚಾರದಲ್ಲೂ ನಾವು ಕರೆಯಬೇಕಿದೆ. ಬಿಜೆಪಿ ಆಂತರಿಕ ವಿಚಾರ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಉತ್ತರಿಸಿದರು.

ಬಿಡದಿ ಯೋಜನೆ ಕೈಬಿಟ್ಟರೆ ಅವರ 5 ಎಕರೆಯನ್ನು ಜನರಿಗೆ ನೀಡುವುದಾಗಿ ನಿಖಿಲ್ ಹೇಳಿದ್ದಾರೆ ಎಂದು ಕೇಳಿದಾಗ, ಅವರ ತಂದೆಯೇ ಯೋಜನೆ ಕೈಬಿಡಲಿಲ್ಲ, ನಾವು ಬಿಡಲು ಹೇಗೆ ಸಾಧ್ಯ, ಅವರು ಜಮೀನು ಕೊಟ್ಟರೆ ಹೋರಾಟ ಮಾಡುತ್ತಿರುವ ರೈತರಿಗೆ ಒಂದೊಂದು ನಿವೇಶನ ನೀಡುತ್ತೇವೆ. ಅವರ ಹೆಸರನ್ನೇ ಆ ಬಡಾವಣೆಗೆ ಇಡುತ್ತೇವೆ. ಬೇನಾಮಿಯಾಗಿ ಜಮೀನು ಮಾಡಿ, ಬೇನಾಮಿಗೆ ಹಣ ಹೋಗುತ್ತದೆ ಎಂದು ಜಿಬಿಐಟಿಗೆ ಪತ್ರ ಬರೆದರು. ಜನರಿಗೆ ಕೊಡುವವರು ಜಿಬಿಐಟಿಗೆ ಪತ್ರ ಯಾಕೆ ಬರೆದರು? 10 ಲಕ್ಷಕ್ಕೆ ಖರೀದಿ ಮಾಡಿದ ಜಮೀನು 2 ಕೋಟಿಗೆ ಹೋಗುತ್ತಿದೆ ಎಂದರು.

ಬಿಡದಿ ಟೌನ್ ಶಿಪ್ ಯೋಜನೆಗೆ ಬೆಂಬಲ ನೀಡುವ ಶಾಸಕರಿಗೆ ಒಂದು ನಿವೇಶನ ನೀಡಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ಮಾನ ಮರ್ಯಾದೆ ಇದ್ದರೆ ದಾಖಲೆ ಸಮೇತ ಹೇಳಬೇಕು. ಕೇಂದ್ರದ ಮಂತ್ರಿಯಾಗಿ ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದನ್ನು ಬಿಡಬೇಕು. ನಿಖಿಲ್ ಅಥವಾ ಬೇರೆ ಬುರುಡೆ ಬಿಡುವ ನಾಯಕರು ಮಾತನಾಡಲಿ. ಕೇಂದ್ರದ ಮಂತ್ರಿಯಾಗಿ ಚಿಲ್ಲರೆ ರಾಜಕಾರಣ ಬಿಡಲಿ. ಅವರು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ, ಇಲ್ಲವಾದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಸವಾಲೆಸೆದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ಬಗ್ಗೆ ಕೇಳಿದಾಗ, ಇದೇ ಕಾರಣಕ್ಕೆ ಫಲಾನುಭವಿಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಎರಡು ತಿಂಗಳಲ್ಲಿ ಪರಿಷ್ಕರಣೆಯಾಗಲಿದೆ. ಪರಿಷ್ಕರಣೆ ನಂತರ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ಲಾಭ ಸಿಗಲಿದೆ ಎಂದು ತಿಳಿಸಿದರು.

ಪಂಚಾಯಿತಿ ಮಟ್ಟದಲ್ಲಿ ಸಮಿತಿ ಮಾಡಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಿದರೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ,“ಪಕ್ಷ ಬೆಳೆಯಬೇಕಾದರೆ ಕಾರ್ಯಕರ್ತರು ಮುಖ್ಯ. ಹೊರೆ ಸರಿದೂಗಿಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಇದೆ. ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದವರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಒತ್ತಡ ಇರುವ ಬಗ್ಗೆ ಕೇಳಿದಾಗ, ವಿಸ್ತರಣೆ ಆಗುವವರೆಗೂ ಒತ್ತಡ ಇರುತ್ತದೆ. ಬಳಿಕ ಒತ್ತಡ ಕಡಿಮಯಾಗುತ್ತದೆ. ಇರೋದು 33 ಸ್ಥಾನ. ಎಲ್ಲರಿಗೂ ಕೊಡಲು ಆಗುವುದಿಲ್ಲ. ಈ ಸರ್ಕಾರ ಮತ್ತೆ 2028ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *